ADVERTISEMENT

ಭಯೋತ್ಪಾದನಾ ನಿಗ್ರಹ ದಳದ ವಶಕ್ಕೆ ಉಗ್ರರು :ತಡ ಮಾಡದೇ ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST

ಬೆಂಗಳೂರು: ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಬಂಧಿಸಲಾದ ಶಂಕಿತ ಉಗ್ರರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಭಯೋತ್ಪಾದನಾ ನಿಗ್ರಹ ದಳ ಮನವಿ ಮಾಡಿದ್ದು, ರಾಜ್ಯ ಸರ್ಕಾರ ಅದಕ್ಕೆ ಸಮ್ಮತಿಸಿದೆ. ಕೇಂದ್ರ ಸರ್ಕಾರ ಶಂಕಿತ ಉಗ್ರರ ವಿಚಾರಣೆ ನಡೆಸಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಆರ್.ಅಶೋಕ ಒತ್ತಾಯಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಜಿಲ್ಲಾ ಮಟ್ಟದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ನಿಗ್ರಹಿಸಲು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಶಂಕಿತ ಉಗ್ರರ ವಿಚಾರಣೆಯಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಬೇಕು ಎಂದರು.

`ದೇಶದ ಶಾಂತಿ- ಸುವ್ಯವಸ್ಥೆ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಸಮಾಧಾನಕರ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ವದಂತಿ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳ ಸಾವಿರಾರು ಮಂದಿ ಬೆಂಗಳೂರಿನಿಂದ ಹೊರಟು ನಿಂತಾಗ ರಾಜ್ಯ ಸರ್ಕಾರವೇ ಎಲ್ಲ ಹೊಣೆ ಹೊತ್ತು ಅವರಲ್ಲಿ ಆತ್ಮವಿಶ್ವಾಸ ತುಂಬಿತು. ಕೇಂದ್ರದಿಂದ ಒಂದು ತಿಳಿವಳಿಕೆ ಪತ್ರ ಬಂದಿದ್ದು ಬಿಟ್ಟರೆ ಬೇರೆ ಯಾವುದೇ ಸಹಕಾರ ಸಿಗಲಿಲ್ಲ. ಕಾವೇರಿ ವಿವಾದದಲ್ಲಿಯೂ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರಿದೆ~ ಎಂದು ಅವರು ಆರೋಪಿಸಿದರು.

`ಬಿಜೆಪಿ ವ್ಯಕ್ತಿ ಕೇಂದ್ರ ಪಕ್ಷವಲ್ಲ~
ಬೆಂಗಳೂರು:
`ಬಿಜೆಪಿಯು ವ್ಯಕ್ತಿ ಪ್ರಧಾನ ಪಕ್ಷವಲ್ಲ. ಪಕ್ಷಕ್ಕೆ ತನ್ನದೇ ನಿಲುವು, ಸಿದ್ಧಾಂತಗಳಿವೆ. ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎಂಬ ತತ್ವ ನಮ್ಮದು. ಕುಟುಂಬ ರಾಜಕಾರಣಕ್ಕೆ ಇಲ್ಲಿ ಆಸ್ಪದವಿಲ್ಲ~ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಅವರು ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಜಿಲ್ಲಾ ಮಟ್ಟದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.`ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ರಾಜಕಾರಣವನ್ನು ಜನ ಧಿಕ್ಕರಿಸುತ್ತಾರೆ. ತಾಯಿ- ಮಕ್ಕಳ ಹಾಗೂ ಅಪ್ಪ- ಮಕ್ಕಳ ರಾಜಕೀಯದಲ್ಲಿ ಈಗ ಅಳಿಯಂದಿರು, ಸೊಸೆಯಂದಿರು ಸೇರಿಕೊಂಡಿದ್ದಾರೆ.

ಇಂತಹ ಕುಟುಂಬ ರಾಜಕಾರಣದಿಂದ ಜನ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಆಳ್ವಿಕೆಯನ್ನು ದೇಶದಿಂದ ಕಿತ್ತೊಗೆಯುವ ಕಾಲ ಬಂದಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ಕಾವೇರಿ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ. ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಎಂಟು ವರ್ಷಗಳ ಹಿಂದೆ ನದಿಗಳ ಜೋಡಣೆಯ ಕನಸು ಕಂಡಿದ್ದರು.

ಆ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ್ದರೆ ನೀರಿನ ಸಮಸ್ಯೆ ಬರುತ್ತಿರಲಿಲ್ಲ. ಆದರೆ ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಕಾವೇರಿ ವಿವಾದವನ್ನು ರಾಜ್ಯ ಯಶಸ್ವಿಯಾಗಿ ಎದುರಿಸಿದ ಬಗ್ಗೆ ಹೆಮ್ಮೆ ಇದೆ~ ಎಂದು ಅನಂತಕುಮಾರ್ ಹೇಳಿದರು.

`ಅವಕಾಶವಾದಿ ರಾಜಕಾರಣ, ಭ್ರಷ್ಟಾಚಾರ, ಬೆಲೆ ಏರಿಕೆಯಂತಹ ಜನವಿರೋಧಿ ನೀತಿಯಿಂದ ಕೇಂದ್ರ ಸರ್ಕಾರ ಜನರ ವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡಿದೆ. ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೇರಿ ಅವರ ನೆಮ್ಮದಿ  ಕಸಿದಿದೆ. ಇವೆಲ್ಲ ಚುನಾವಣೆಯಲ್ಲಿ ನಮ್ಮ ಅಸ್ತ್ರಗಳಾಗಲಿವೆ~ ಎಂದರು.

ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿ, ರಾಜ್ಯದ ಕಾಂಗ್ರೆಸ್ ನಾಯಕರು ಇತ್ತೀಚೆಗೆ ನಡೆಸಿದ `ಲೆಕ್ಕ ಕೊಡಿ~ ಆಂದೋಲನ ಹಾಸ್ಯಾಸ್ಪದ ಎಂದರು.ಸಂವಿಧಾನದ ಪ್ರಕಾರ ಎಲ್ಲಿ ಮತ್ತು ಹೇಗೆ ಲೆಕ್ಕ ಕೇಳಬೇಕು ಎಂಬ ಸಾಮಾನ್ಯ ಜ್ಞಾನವೂ ಅವರಿಗಿಲ್ಲ. ಕೇಂದ್ರದಿಂದ ಬಂದ ಅನುದಾನವನ್ನು ಹೀಗೆ ಬೀದಿಗೆ ಬಂದು ಕೇಳುವ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ಇಲ್ಲ ಎಂದು ಅವರು ಟೀಕಿಸಿದರು.

ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಮಾತನಾಡಿ, “ಕೇಂದ್ರ ಸರ್ಕಾರ ಭೂಮಿ, ಆಕಾಶ, ಪಾತಾಳ ಸೇರಿದಂತೆ ಎಲ್ಲ ಕಡೆ ಭ್ರಷ್ಟಾಚಾರ ನಡೆಸಿದೆ ಎಂದರು. ಕಾಮನ್ ವೆಲ್ತ್, 2ಜಿ ಹಗರಣ, ಕಲ್ಲಿದ್ದಲು ಹಗರಣಗಳ ಲೆಕ್ಕ ಕೊಟ್ಟು ನಂತರ ಕೇಂದ್ರದಿಂದ ಬಂದ ಅನುದಾನದ ಬಗ್ಗೆ ಲೆಕ್ಕ ಕೇಳಲಿ. ನಮ್ಮ ದೇಶದ ಹಣವನ್ನೆಲ್ಲ ಕೊಳ್ಳೆ ಹೊಡೆದು ತವರಿಗೆ ತುಂಬುತ್ತಿರುವ `ಇಟಲಿ ಅಮ್ಮ~ ಮೊದಲು ಜನತೆಗೆ ತಮ್ಮ ಲೆಕ್ಕ ನೀಡಲಿ” ಎಂದು ಅವರು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.