ADVERTISEMENT

ಭಸ್ಮದ ತೈಲ ನೀಡಿ ನಿವೃತ್ತ ಆರೋಗ್ಯಾಧಿಕಾರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:47 IST
Last Updated 3 ಫೆಬ್ರುವರಿ 2019, 19:47 IST

ಬೆಂಗಳೂರು: ‘ಪಂಚವಟಿ ಆಯುರ್ವೇದಿಕ್‌ ಕ್ಲಿನಿಕ್ ವೈದ್ಯರು ನನ್ನಿಂದ ₹4.05 ಲಕ್ಷ ಪಡೆದುಕೊಂಡು ಯಾವುದೋ ಭಸ್ಮ ಮಿಶ್ರಿತ ತೈಲ ಕೊಟ್ಟು ವಂಚಿಸಿದ್ದಾರೆ’ ಎಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀರಂಗಪ್ಪ ಎಂಬುವರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ.

ದೂರಿನನ್ವಯ ನೆಲಮಂಗಲದ ಮಲ್ಲಿಕಾರ್ಜುನ, ಆಕಾಶ್, ವಿರೂಪಾಕ್ಷ ಮತ್ತು ಕ್ಲಿನಿಕ್‌ನ ಆನಂದ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

‘ಮಡಿಕೇರಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದೇನೆ. 2018ರ ಅಕ್ಟೋಬರ್‌ನಲ್ಲಿ ಮನೆ ಬಳಿ ಓಡಾಡುತ್ತಿದ್ದಾಗ ಎದುರಿಗೆ ಬಂದಿದ್ದ ಆಕಾಶ್, ‘ಏನು ಸರ್, ಇಷ್ಟು ನೋವಿನಿಂದ ನಡೆದಾಡುತ್ತಿದ್ದೀರಿ. ನನ್ನ ಅಣ್ಣ ಮಲ್ಲಿಕಾರ್ಜುನ, ತುಳಸಿಯಿಂದ ಒಳ್ಳೆಯ ಔಷಧ ತಯಾರಿಸಿ ಕೊಡುತ್ತಾನೆ. ನಮ್ಮ ತಂದೆಯೂ ಅದೇ ಔಷಧಿಯಿಂದ ಗುಣಮುಖರಾಗಿದ್ದಾರೆ’ ಎಂದು ಹೇಳಿ ಮೊಬೈಲ್ ನಂಬರ್ ಕೊಟ್ಟು ಹೋಗಿದ್ದ’ ಎಂದು ಶ್ರೀರಂಗಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಎರಡು ದಿನಗಳ ಬಳಿಕ ಮೊಬೈಲ್‌ಗೆ ಕರೆ ಮಾಡಿದ್ದೆ. ಬೆಂಗಳೂರಿಗೆ ಬರುವಂತೆ ಆರೋಪಿ ಹೇಳಿದ್ದ. 2018ರ ಅ. 24ರಂದು ಮೆಜೆಸ್ಟಿಕ್‌ಗೆ ಬಂದಿದ್ದೆ. ಆರೋಪಿ ಮಲ್ಲಿಕಾರ್ಜುನ, ಕ್ಲಿನಿಕ್‌ಗೆ ಕರೆದೊಯ್ದು ಆನಂದ್‌ ಎಂಬಾತನನ್ನು ವೈದ್ಯನೆಂದು ಪರಿಚಯ ಮಾಡಿಸಿದ್ದ. ಆತನೇ ತೈಲದಲ್ಲಿ ಹಲವು ಬಗೆಯ ಭಸ್ಮಗಳನ್ನು ಬೆರೆಸಿ ಕೊಟ್ಟಿದ್ದ. ತಲೆ, ಕೈ– ಕಾಲುಗಳಿಗೆ ತೈಲ ಹಚ್ಚಿದರೆ ನೋವು ಹೋಗುತ್ತದೆ ಎಂದಿದ್ದ. ಆ ತೈಲ ಔಷಧಿಗೆ ₹4.05 ಲಕ್ಷ ಕೇಳಿದ್ದ. ₹10,790 ಸ್ಥಳದಲ್ಲೇ ಆತನಿಗೆ ಕೊಟ್ಟು, ಉಳಿದ ಹಣಕ್ಕೆ ಚೆಕ್‌ ನೀಡಿದ್ದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ತೈಲದಿಂದ ನೋವು ಕಡಿಮೆ ಆಗಲಿಲ್ಲ. ವೈದ್ಯನನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಆ ವೈದ್ಯ, ಯಾವುದೋ ತೈಲವನ್ನು ಕೊಟ್ಟು ಮೋಸ ಮಾಡಿದ್ದಾನೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.