ADVERTISEMENT

ಭಾರಿ ಸ್ಪಂದನೆ: ಪುಸ್ತಕ ಮೇಳಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:40 IST
Last Updated 8 ಜನವರಿ 2012, 19:40 IST

ಬೆಂಗಳೂರು:  ಕನ್ನಡ ಪುಸ್ತಕ ಪ್ರಾಧಿಕಾರದ ನಾಲ್ಕು ದಿನಗಳ `ಪುಸ್ತಕ ಮೇಳ~ಕ್ಕೆ ಭಾನುವಾರ ತೆರೆ ಬಿತ್ತು. ವಾರಾಂತ್ಯವಾದ್ದರಿಂದ ನಗರದ ವಿವಿಧ ಭಾಗದಿಂದ ಆಗಮಿಸಿದ ಪುಸ್ತಕ ಪ್ರಿಯರು ಮಳಿಗೆಗಳಿಗೆ ಭೇಟಿ ನೀಡಿ ತಮ್ಮಿಷ್ಟದ ಪುಸ್ತಕವನ್ನು ಕೊಂಡುಕೊಂಡರು. 

 ಕುವೆಂಪು, ದ.ರಾ.ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಎಸ್.ಎಲ್.ಭೈರಪ್ಪ ಸೇರಿದಂತೆ ತಮ್ಮ ನೆಚ್ಚಿನ ಕಾದಂಬರಿಕಾರ ಮತ್ತು ಕವಿಗಳ ಪುಸ್ತಕಗಳಿಗಾಗಿ ಮಳಿಗೆಗಳಿಗೆ ಎಡತಾಕಿದರು.

`ಬಹುತೇಕ ಮಳಿಗೆಗಳು ಶೇ 25ರಿಂದ 50ರಷ್ಟು ರಿಯಾಯಿತಿ ನೀಡಿರುವುದರಿಂದ ಓದುಗರಿಂದ ಪುಸ್ತಕ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾಲ್ಕು ದಿನಗಳಲ್ಲಿ ಒಟ್ಟು ಒಂದೂವರೆ ಕೋಟಿ ರೂಪಾಯಿ ವಹಿವಾಟು ನಡೆದಿರುವುದು ಪುಸ್ತಕೋದ್ಯಮದಲ್ಲೇ ಉತ್ತಮ ಬೆಳವಣಿಗೆ~ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

`ಈ ಮೇಳಗಳಿಂದ ಕನ್ನಡ ಪುಸ್ತಕೋದ್ಯಮಕ್ಕೆ ಅಳಿವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಭಿರುಚಿಗೆ ತಕ್ಕಂತೆ ಮುದ್ರಣಗೊಂಡಿರುವ ಪುಸ್ತಕಗಳು ಎಲ್ಲ ವರ್ಗದ ಜನರನ್ನು ಆಕರ್ಷಿಸಿವೆ. ಇದರಿಂದ ಪ್ರೇರಣೆಗೊಂಡು ಮುಂದಿನ ದಿನಗಳಲ್ಲಿ ಧಾರವಾಡದಲ್ಲಿ ಮೇಳವನ್ನು ಆಯೋಜಿಸಲು ಚಿಂತಿಸಲಾಗಿದೆ~ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ  ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, `ಹಳೆಗನ್ನಡವನ್ನು ಹೊಸಗನ್ನಡಕ್ಕೆ ಭಾಷಾಂತರಿಸುವ ಪ್ರವೃತ್ತಿ ಹೆಚ್ಚಾಗಿರುವುದರಿಂದ ಈಗಿನ ಪೀಳಿಗೆ ಹಳೆಗನ್ನಡದ ಜ್ಞಾನ ಪಡೆದಿಲ್ಲ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಹಳೆಗನ್ನಡದ ಗ್ರಂಥಗಳನ್ನು ಪುನರ್ ಮುದ್ರಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಚಿಂತನೆ ನಡೆಸಬೇಕು~ ಎಂದು ಸಲಹೆ ನೀಡಿದರು.

`ಎಲ್ಲಾ ಭಾಷೆಗಳ ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಆದರೆ ಅಂತರ್ಜಾಲದಲ್ಲಿರುವ ಪುಸ್ತಕಗಳು ಸಂಶೋಧನಾ ಅಧ್ಯಯನದಂತಹ ಕಾರ್ಯದಲ್ಲಿ ಸಹಕರಿಸುತ್ತವೆ ಹೊರತು ಆತ್ಮತೃಪ್ತಿ ನೀಡುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಪುಸ್ತಕ ಮತ್ತು ಪ್ರಕಾಶಕರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಮುದ್ರಣಗೊಂಡ ಪ್ರತಿ ಪುಸ್ತಕಕ್ಕೂ ಓದುಗನಿರುತ್ತಾನೆ~ ಎಂದರು.

`ಪುಸ್ತಕ ಮೇಳವನ್ನು ಆಯೋಜಿಸುವುದರಿಂದ ಎಲ್ಲಾ ಪುಸ್ತಕಗಳಿಗೂ ಪ್ರಚಾರ ದೊರೆಯುತ್ತದೆ. ಓದುಗನ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಇಂತಹ ಮೇಳಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಡೆಯಬೇಕು~ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.