ADVERTISEMENT

ಭಿಕ್ಷುಕರ ಜಾಗ ಪರಭಾರೆ ಇಲ್ಲ

​ಪ್ರಜಾವಾಣಿ ವಾರ್ತೆ
Published 30 ಜನವರಿ 2012, 19:30 IST
Last Updated 30 ಜನವರಿ 2012, 19:30 IST
ಭಿಕ್ಷುಕರ ಜಾಗ ಪರಭಾರೆ ಇಲ್ಲ
ಭಿಕ್ಷುಕರ ಜಾಗ ಪರಭಾರೆ ಇಲ್ಲ   

ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿರುವ ಭಿಕ್ಷುಕರ ಕಾಲೋನಿಯ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪರಭಾರೆ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಹೈಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಲಾಗಿದೆ.

ಸುಮಾರು 123 ಎಕರೆ ಜಾಗವನ್ನು ಆಸ್ಪತ್ರೆ, ಸಮ್ಮೇಳನ ಸಭಾಂಗಣ ಸೇರಿದಂತೆ ಇತರ ಬಳಕೆಗೆ ಪ್ರಾಧಿಕಾರಕ್ಕೆ ನೀಡಲು ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಈ ಸಂಬಂಧ ಇದೇ 27ರಂದು ಸರ್ಕಾರ ನಿರ್ಣಯ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದರು.

ಪರಭಾರೆ ಕುರಿತಾಗಿ 2010ರ ಜೂನ್ 10ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ `ಹೆಲ್ತ್ ಫೌಂಡೇಷನ್~ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಈ ಮಾಹಿತಿ ನೀಡಲಾಗಿದೆ. ಈ ಕುರಿತಾಗಿ ಲಿಖಿತ ಮಾಹಿತಿ ನೀಡುವಂತೆ ನಿರ್ದೇಶಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿತು.

`ನ್ಯಾಯಮೂರ್ತಿಗಳಿಗೆ ವಸತಿ~
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಬಂಧ ಮೂರು ಕಡೆಗಳಲ್ಲಿ ಜಾಗವನ್ನು ಗೊತ್ತು ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶಿಸಿದೆ.

`ನ್ಯಾಯಮೂರ್ತಿಗಳಿಗೆ ವಸತಿ ಕಲ್ಪಿಸುವ ಸಂಬಂಧ 2010ರ ಸೆ.14ರಂದು ರಚನೆಗೊಂಡಿರುವ ಸಮಿತಿಯು ಈ ಕುರಿತು ವಾರದೊಳಗೆ ಚರ್ಚಿಸಿ ಮಾಹಿತಿ ನೀಡಬೇಕು~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

`ಈಗಾಗಲೇ ಹೆಬ್ಬಾಳ ಹಾಗೂ ಇತರ ಕಡೆಗಳಲ್ಲಿ ಕೆಲವು ವಸತಿಗೃಹಗಳು ಇವೆ. ಇನ್ನೂ 25 ನ್ಯಾಯಮೂರ್ತಿಗಳಿಗೆ ಇದರ ಅಗತ್ಯ ಇದೆ~ ಎಂದು ಪೀಠ ತಿಳಿಸಿದೆ. ವಸತಿಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

`ಆರೋಪಿಗಳನ್ನು ಬಂಧಿಸಬೇಡಿ~
ಬಿಬಿಎಂಪಿ ಬಹುಕೋಟಿ ಹಗರಣದಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತ ಎಂಜಿನಿಯರ್‌ಗಳನ್ನು ಬಂಧಿಸಬಾರದು ಎಂದು ಸಿಐಡಿ ಪೊಲೀಸರಿಗೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಮಲ್ಲೇಶ್ವರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ್‌ಕುಮಾರ್, ರಾಜರಾಜೇಶ್ವರಿನಗರ ವಿಭಾಗದ ಎಂಜಿನಿಯರ್ ಕೀರಾ ನಾಯ್ಕ, ಕಿರಿಯ ಎಂಜಿನಿಯರ್ ಎಂ.ಪ್ರಭು ಹಾಗೂ ಎಂಜಿನಿಯರ್ ಮಲ್ಲಿಕಾರ್ಜುನ ಗೌಡ ಅವರಿಗೆ ಕಿರುಕುಳ ನೀಡದಂತೆಯೂ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಆದೇಶಿಸಿದ್ದಾರೆ.

`ಒಂದು ವೇಳೆ ಇವರ ವಿರುದ್ಧದ ಆರೋಪ ಸಾಬೀತಾದರೆ ಕೋರ್ಟ್ ಆದೇಶವಿಲ್ಲದೆ ಬಂಧಿಸಬಾರದು~ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಬಿಎಸ್‌ವೈ: ಆದೇಶ ಮುಂದೂಡಿಕೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ದಾಖಲು ಮಾಡಿರುವ ಒಂದು ಮತ್ತು ನಾಲ್ಕನೇ ದೂರಿಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸುವ ದಿನಾಂಕವನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಮುಂದೂಡಿದೆ.

ರಾಚೇನಹಳ್ಳಿ ಮತ್ತು ಹೆಬ್ಬಾಳದ ಬಳಿ ಇರುವ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಟ್ಟಿರುವ ಪ್ರಕರಣ ಇದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಆದೇಶ ಪ್ರಕಟಗೊಳ್ಳಬೇಕಿತ್ತು. ಆದರೆ ಇದೇ ವಿವಾದದ ಕುರಿತಾಗಿ ಹೈಕೋರ್ಟ್‌ನಲ್ಲಿ ತೀರ್ಪು ಇತ್ಯರ್ಥಕ್ಕೆ ಬಾಕಿ ಇರುವ ಹಿನ್ನೆಲೆಯಲ್ಲಿ ಆದೇಶ ಪ್ರಕಟವನ್ನು ಕ್ರಮವಾಗಿ ಫೆ. 2 ಮತ್ತು 3ಕ್ಕೆ ಮುಂದೂಡಲಾಗಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಅರ್ಥ್ ಮೂವರ್ಸ್‌ ಲಿಮಿಟೆಡ್‌ನಲ್ಲಿ (ಬಿಇಎಂಎಲ್) ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಯುತ್ತಿದ್ದು, ಈ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಕೆ.ಸುಬ್ರಹ್ಮಣ್ಯಂ ಶಾಸ್ತ್ರಿ ಎನ್ನುವವರು ಸಲ್ಲಿಸಿರುವ ಈ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾಗಿರುವ ಸಿಬಿಐ ಹಾಗೂ ಕೇಂದ್ರ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೋಮವಾರ ನೋಟಿಸ್ ಜಾರಿಗೆ ಆದೇಶಿಸಿದೆ.

`ಬಿಇಎಂಎಲ್ ವ್ಯವಸ್ಥಾಪಕ ನಿರ್ದೇಶಕ ವಿಆರ್‌ಎಸ್ ನಟರಾಜನ್ ಅವರು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಗಣಿ ಮಾಫಿಯಾದಿಂದ ದೇಶಕ್ಕೆ 118 ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರೂ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಳ್ಳಲು ಸಿಬಿಐಗೆ ಆದೇಶಿಸಬೇಕು~ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.