ADVERTISEMENT

ಭೂ ವಿವಾದ ಕಾರಣ?

ಗೋಪಿ ಕುಟುಂಬ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:55 IST
Last Updated 13 ಡಿಸೆಂಬರ್ 2013, 19:55 IST

ಬೆಂಗಳೂರು: ಭೂ ವಿವಾದಕ್ಕೆ ಸಂಬಂಧಿಸಿದಂತೆ ರೌಡಿಗಳಿಂದ ಪ್ರಾಣ ಬೆದರಿಕೆ ಇದ್ದ ಕಾರಣಕ್ಕೆ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಕಾರ್ಯಕರ್ತ ಗೋಪಿ ಮತ್ತು ಕುಟುಂಬ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗೋಪಿ ಮತ್ತು ಸಹೋದರರು ಬೈಯಪ್ಪನಹಳ್ಳಿ ಬಳಿಯ ಸಂಜೀವಪ್ಪ ಲೇಔಟ್‌ನ 10ನೇ ‘ಬಿ’ ಅಡ್ಡರಸ್ತೆಯ  ಜಾಗದಲ್ಲಿ ಒಂದು ವರ್ಷದ ಹಿಂದೆ ಮನೆ ಕಟ್ಟಿಸಿದ್ದರು. ಆದರೆ, ಆ ಜಾಗದ ವಿಷಯವಾಗಿ ವಿವಾದವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಜಾಗವನ್ನು ಕಬಳಿಸಲು ಪ್ರಯತ್ನ ನಡೆಸಿದ್ದ ಕೆಲ ವ್ಯಕ್ತಿಗಳು ರೌಡಿಗಳ ಮೂಲಕ ಗೋಪಿ ಅವರಿಗೆ ಕರೆ ಮಾಡಿಸಿ ಹಲವು ತಿಂಗಳುಗಳಿಂದ ಕೊಲೆ ಬೆದರಿಕೆ ಹಾಕಿಸುತ್ತಿದ್ದರು. ಅಲ್ಲದೆ, ಅವರ ಮಕ್ಕಳನ್ನು ಕೊಲೆ ಮಾಡುವುದಾಗಿಯೂ ಬೆದರಿಸಿದ್ದರು ಎಂದು ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಗೋಪಿ ಅವರ ಮನೆಯ ಒಳಗಡೆ ಮತ್ತು ಬಾಗಿಲ ಬಳಿ ಅಳವಡಿಸಿದ್ದ ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಯ ತುಣಕು ಹಾಗೂ ಅವರು ಬರೆದಿಟ್ಟಿರುವ ಪತ್ರವನ್ನು ಹೆಚ್ಚಿನ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಪಿ.ಎಸ್‌.ಹರ್ಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೈದ್ಯರು ಮರಣೋತ್ತರ ಪರೀಕ್ಷೆಯ ವರದಿ ನೀಡಿದ ಬಳಿಕವಷ್ಟೇ ಆ ನಾಲ್ವರ ಸಾವಿನ ಸಮಯ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಸಿಗಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧ ಗೋಪಿ ಮತ್ತು ಕುಟುಂಬ ಸದಸ್ಯರ ಮೊಬೈಲ್‌ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅವರ ಸಂಬಂಧಿಕರು, ನೆರೆಹೊರೆಯವರು ಹಾಗೂ ಸ್ನೇಹಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಬೌರಿಂಗ್‌ ಆಸ್ಪತ್ರೆಯಲ್ಲಿ ಗೋಪಿ ಮತ್ತು ಕುಟುಂಬ ಸದಸ್ಯರ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಶವಗಳನ್ನು ಶುಕ್ರವಾರ ಸಂಬಂಧಿಕರಿಗೆ ಒಪ್ಪಿಸಿದರು. ಆ ನಂತರ ನಾಗವಾರಪಾಳ್ಯ ಸ್ಮಶಾನದಲ್ಲಿ ಸಾಮೂಹಿಕವಾಗಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.

ರೌಡಿಗಳ ಬೆದರಿಕೆ

ಮನೆಯ ಜಾಗದ ವಿಷಯವಾಗಿ ರೌಡಿಗಳು ಕೊಲೆ ಬೆದರಿಕೆ ಹಾಕಿದ್ದ ಸಂಗತಿಯನ್ನು ಗೋಪಿ, ಒಂದು ತಿಂಗಳ ಹಿಂದೆ ನನಗೆ ತಿಳಿಸಿದ್ದ. ಆರ್ಥಿಕ ತೊಂದರೆಯ ಕಾರಣಕ್ಕೆ ಗೋಪಿ ಮತ್ತು ಕುಟುಂಬ ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಕಡಿಮೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು.
–ವಾಟಾಳ್‌ ನಾಗರಾಜ್, ಅಧ್ಯಕ್ಷರು, ಕನ್ನಡ ಚಳವಳಿ ವಾಟಾಳ್‌ ಪಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT