ADVERTISEMENT

ಭೈರಸಂದ್ರ ಕೆರೆ ಅಭಿವೃದ್ಧಿ: ಸಂಸದ ಅನಂತ ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಬೆಂಗಳೂರು: ಜಯನಗರದ ಭೈರಸಂದ್ರ ಕೆರೆಯನ್ನು ಅತಿಕ್ರಮಣಕಾರರಿಂದ ರಕ್ಷಿಸುವ ಸಲುವಾಗಿ ಕೆರೆ ಸುತ್ತ ಬೇಲಿ ನಿರ್ಮಾಣ ಕಾರ್ಯವನ್ನು ಫೆಬ್ರುವರಿ 10ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಂಸದ ಅನಂತ ಕುಮಾರ್ ತಿಳಿಸಿದರು.

ಭೈರಸಂದ್ರ ಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳುವ ಸಂಬಂಧ ಬೆಂಗಳೂರು ಜಲಮಂಡಳಿಯವರು ಯೋಜನೆ ಸಿದ್ಧಪಡಿಸಿದ್ದಾರೆ. ಆ ಯೋಜನೆಯನ್ನು ಮೂರು ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದರು.

ಕೆರೆಯ ಸ್ಥಿತಿಗತಿ ಕುರಿತು ಅವಲೋಕಿಸಲು ಮಂಗಳವಾರ ಭೈರಸಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಕೆರೆಯ ಸುತ್ತ ಪಾದಚಾರಿ ಮಾರ್ಗ ನಿರ್ಮಾಣ ಮತ್ತು ಕೆರೆಯಲ್ಲಿ ಬೆಳೆದಿರುವ ಜೊಂಡು ಕೀಳುವ ಕೆಲಸವನ್ನು ಯುಗಾದಿಯ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕೆರೆಯ 3.5 ಎಕರೆ ಪ್ರದೇಶ ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, `ಆ ಕುರಿತು ಸ್ಥಳೀಯ ಶಾಸಕ ಹೇಮಚಂದ್ರ ಡಿ. ಸಾಗರ್ ಅವರ ಜೊತೆ ಮಾತನಾಡುತ್ತೇನೆ~ ಎಂದರು. ಹೇಮಚಂದ್ರ ಸಾಗರ್ ಅವರು ಈ ಸಂದರ್ಭದಲ್ಲಿ ಅನಂತ ಕುಮಾರ್ ಜೊತೆಗಿದ್ದರು.

`ಇದು ಹನ್ನೊಂದನೇ ಬಾರಿ!~:
`ಅನಂತ ಕುಮಾರ್ ಅವರು ಭೈರಸಂದ್ರ ಕೆರೆಗೆ ಈವರೆಗೆ 10 ಬಾರಿ ಬಂದಿದ್ದಾರೆ. ಕೆರೆ ಅಭಿವೃದ್ಧಿ ಕುರಿತು ಅಷ್ಟೇ ಬಾರಿ ಗುದ್ದಲಿ ಪೂಜೆ ನಡೆಸಿದ್ದಾರೆ. ಈಗ ಹನ್ನೊಂದನೆಯ ಸಲ ಅವರು ಇಲ್ಲಿಗೆ ಬರುತ್ತಿದ್ದಾರೆ. ಈ ಬಾರಿಯಾದರೂ ಕೆರೆ ಅಭಿವೃದ್ಧಿ ಕಾಮಗಾರಿ ಆರಂಭವಾಗಬಹುದು ಎಂಬ ಭರವಸೆ ಇದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಮಾಧ್ಯಮ ಪ್ರತಿನಿಧಿಗಳಲ್ಲಿ ಹೇಳಿಕೊಂಡರು.

ಭೈರಸಂದ್ರದ ಸುತ್ತಲಿನ ಪ್ರದೇಶಗಳ ನಾಗರಿಕರಿಗೆ ಉದ್ಯಾನವನದ ಸೌಕರ್ಯವಿದೆ. ಆದರೆ ಇಲ್ಲಿ ಮಾತ್ರ ಅಂಥ ವ್ಯವಸ್ಥೆ ಇಲ್ಲ. ಕೆರೆಯನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಿ, ಅದರ ಸುತ್ತ ಪಾದಚಾರಿ ಮಾರ್ಗ ನಿರ್ಮಿಸಿದರೆ ಮುಂಜಾನೆ ಮತ್ತು ಸಂಜೆಯ ವಾಯುವಿಹಾರಕ್ಕೂ ಅನುಕೂಲವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.