ADVERTISEMENT

ಭ್ರಷ್ಟಾಚಾರ ಹತ್ತಿಕ್ಕಲು ನಿದ್ದೆಯಿಂದ ಹೊರಬನ್ನಿ

​ಪ್ರಜಾವಾಣಿ ವಾರ್ತೆ
Published 2 ಮೇ 2011, 9:00 IST
Last Updated 2 ಮೇ 2011, 9:00 IST
ಭ್ರಷ್ಟಾಚಾರ ಹತ್ತಿಕ್ಕಲು ನಿದ್ದೆಯಿಂದ ಹೊರಬನ್ನಿ
ಭ್ರಷ್ಟಾಚಾರ ಹತ್ತಿಕ್ಕಲು ನಿದ್ದೆಯಿಂದ ಹೊರಬನ್ನಿ   

ಬೆಂಗಳೂರು: `ದೇಶದಲ್ಲಿ ಭ್ರಷ್ಟಾಚಾರದ ಮಿತಿ ತಾರಕಕ್ಕೇರಿದ್ದು, ಇಡೀ ಸಮಾಜವನ್ನೇ ಅಶಾಂತಿಯತ್ತ ಕೊಂಡೊಯ್ಯುವ ಸ್ಥಿತಿ ತಲುಪಿದೆ~  ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಏರ್ಪಡಿಸಿದ್ದ `ಭ್ರಷ್ಟಾಚಾರ ಹತ್ತಿಕ್ಕಲು ಜನಲೋಕಪಾಲ್‌ ಮಸೂದೆ~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಭ್ರಷ್ಟಾಚಾರಕ್ಕೆ ಮುಖ್ಯವಾಗಿ ಸರ್ಕಾರಗಳೇ ಕಾರಣವಾಗಿವೆ. ಅಧಿಕಾರಿಗಳು ಸೇರಿದಂತೆ ಪ್ರತಿನಿಧಿಗಳು ಸಂಪತ್ತನ್ನು ಲೂಟಿ ಮಾಡುವ  ಕೆಲಸಕ್ಕೆ ಮುಂದಾಗಿರುವುದು ಭ್ರಷ್ಟಾಚಾರದ  ಮೂಲವಾಗಿದೆ~ ಎಂದು ಅವರು ಹೇಳಿದರು.

ಕುಂಭಕರ್ಣ ಪ್ರಜಾಪ್ರಭುತ್ವ: `ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಧ್ವನಿ ಎತ್ತಿದ ನಂತರ ನಮಗೆ ಜ್ಞಾನೋದಯವಾಗಿದೆ. ಈವರೆಗೂ ಕುಂಭಕರ್ಣನ ಹಾಗೆ ನಿದ್ದೆ ಮಾಡುತ್ತಿದ್ದ ಪ್ರಜಾಪ್ರಭುತ್ವವು ಇನ್ನಾದರೂ ನಿದ್ದೆಯಿಂದ ಹೊರಬರಬೇಕು. ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಕಣ್ಣೊರೆಸುವ ಕೆಲಸ ಮಾಡಿದೆ. ತಾತ್ಸಾರ ಮಾಡಿದರೆ ಹೋರಾಟದ ಹಾದಿ ವ್ಯರ್ಥವಾಗುತ್ತದೆ. ಇಂತಹ ವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡುವ ಪ್ರತಿ ಪ್ರಜೆ ಸದಾ ಎಚ್ಚರವಾಗಿರಬೇಕು~ ಎಂದು ಸಲಹೆ ನೀಡಿದರು.

ಪಾರದರ್ಶಕತೆ ಇರಲಿ: `ಲೋಕಪಾಲರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಕಾರ್ಪೊರೇಟ್‌ ವಲಯಗಳನ್ನು ಸಹ ಲೋಕಪಾಲ ಮಿತಿಗೆ ಒಳಪಡಿಸಬೇಕು. ಕೇವಲ ನ್ಯಾಯಾಂಗದ ಹಿಡಿತದಲ್ಲಿ ಲೋಕಪಾಲ ಮಸೂದೆ ಇರಬೇಕೇ ಹೊರತು ಯಾವುದೇ ರಾಜಕೀಯ ಪಕ್ಷಗಳ ಕೈಗೊಂಬೆಗಳಾಗಿ ವರ್ತಿಸುವಂತಾಗಬಾರದು.

ಈ ಎಲ್ಲಾ ಅಂಶಗಳನ್ನು ಗಮಿಸಿ ಲೋಕಪಾಲ್‌ ಮಸೂದೆಯನ್ನು ಪಾರದರ್ಶಕವಾಗಿ ಜಾರಿಗೆ ತರಬೇಕು. ಅಲ್ಲದೆ ರಾಜ್ಯದಲ್ಲೂ ಸಹ ಲೋಕಾಯುಕ್ತರಿಗೆ ಸಂಪೂರ್ಣ ಅಧಿಕಾರ ನೀಡಬೇಕು. ಯಾವುದೇ ತಪ್ಪಿತಸ್ಥ ಅಧಿಕಾರಿಯನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸುವ ಅಧಿಕಾರ ಲೋಕಾಯುಕ್ತರಿಗೂ ನೀಡಬೇಕು. ಮಸೂದೆ ರಚನೆಯಲ್ಲಿ ಯಾವುದೇ ಆಂತರಿಕ ಭಿನ್ನ ಅಭಿಪ್ರಾಯಗಳಿದ್ದರೂ ಸಮಾಜಕ್ಕೆ ಪೂರವಾಗಿರಬೇಕು~ ಎಂದು ಹೇಳಿದರು.

ರಾಜ್ಯ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತಸುಬ್ಬರಾವ್‌ ಮಾತನಾಡಿ `ಭ್ರಷ್ಟಾಚಾರಕ್ಕೆ ಮೂಲ ಕಾರಣವೇ ಕಾರ್ಪೊರೇಟ್‌ ಸಂಸ್ಥೆಗಳು. ಸರ್ಕಾರ ಅವುಗಳಿಗೆ ಅನುಕೂಲವಾಗುವ ಕಾನೂನು ಜಾರಿ ಮಾಡಿ ಸಮಾಜದ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಸ್ಪೆಕ್ಟ್ರಂ ಹಗರಣದಲ್ಲಿ ಭಾಗಿಯಾಗಿರುವ ಕಾರ್ಪೊರೇಟ್‌ ಉದ್ಯಮ ಸಂಸ್ಥೆಗಳೇ ಭ್ರಷ್ಟಾಚಾರಕ್ಕೆ ಉತ್ತಮ ನಿದರ್ಶನ~ ಎಂದರು.

ಇದೇ ಸಂದರ್ಭದಲ್ಲಿ 93 ವಸಂತ ಗಳನ್ನು ಪೂರೈಸಿದ ಎಚ್‌.ಎಸ್‌.ದೊರೆದ್ವಾಮಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ, ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ ಇತರರು ಉಪಸ್ಥಿತರಿದ್ದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.