ADVERTISEMENT

ಮಂತ್ರಿ ಸ್ವಸ್ತಿಕ್ ಮೆಟ್ರೊ ನಿಲ್ದಾಣಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 20:21 IST
Last Updated 6 ಸೆಪ್ಟೆಂಬರ್ 2013, 20:21 IST

ಬೆಂಗಳೂರು: ಬಹುಮಹಡಿ ಅವಳಿ ಕಟ್ಟಡಗಳನ್ನು ಒಳಗೊಂಡ ಮಂತ್ರಿ ಸ್ವಸ್ತಿಕ್ ಮೆಟ್ರೊ ರೈಲು ನಿಲ್ದಾಣ ನಿರ್ಮಾಣಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಪ್ಪಿಗೆ ನೀಡಿದೆ. ಕಳೆದ ಎರಡು ವರ್ಷಗಳಿಂದ ಮೀನ-ಮೇಷ ಎಣಿಸುತ್ತಿದ್ದ ಬಿಬಿಎಂಪಿ, ಕೊನೆಗೂ ಒಪ್ಪಿಗೆ ನೀಡಿದ್ದರಿಂದ ಅವಳಿ ಗೋಪುರಗಳ ಮಧ್ಯೆ ಮೆಟ್ರೊ ನಿಲ್ದಾಣ ನಿರ್ಮಾಣವಾಗುವುದು ಖಚಿತವಾಗಿದೆ.

ಮೆಟ್ರೊ ನಿಲ್ದಾಣದ ಎರಡೂ ಬದಿಯಲ್ಲಿ ಒಂದೊಂದು ಬಹುಮಹಡಿ ಕಟ್ಟಡ ತಲೆ ಎತ್ತಲಿದೆ. ಒಂದು 32 ಅಂತಸ್ತು (112.9 ಮೀಟರ್ ಎತ್ತರ) ಹೊಂದಿದ್ದರೆ, ಮತ್ತೊಂದು 29 ಅಂತಸ್ತಿನ (100.85 ಮೀಟರ್ ಎತ್ತರ) ಕಟ್ಟಡವಾಗಲಿದೆ. ಒಂದು ವಸತಿ ಸಂಕೀರ್ಣವಾದರೆ, ಮತ್ತೊಂದು ವಾಣಿಜ್ಯ ಸಂಕೀರ್ಣವಾಗಿ ರೂಪುಗೊಳ್ಳಲಿದೆ. ಎರಡೂ ಕಟ್ಟಡಗಳ ನಡುವೆ ಮೆಟ್ರೊ ರೈಲಿಗೆ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ ಅವರು ಜುಲೈ 26ರಂದು ನೀಡಿದ ನಿರ್ದೇಶನದಂತೆ ಯೋಜನಾ ವಿಭಾಗ ಆಗಸ್ಟ್ 22ರಂದು ಯೋಜನೆಗೆ ಒಪ್ಪಿಗೆ ನೀಡಿದೆ. ಎರಡೂ ಕಟ್ಟಡಗಳು ಒಟ್ಟು 1,77,885.10 ಚದರ ಅಡಿ ವಿಸ್ತೀರ್ಣ ಹೊಂದಿರಲಿವೆ. ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಮತ್ತು ಮಂತ್ರಿ ಇನ್‌ಫ್ರಾಸ್ಟ್ರಕ್ಷರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಂಟಿಯಾಗಿ ಈ ಯೋಜನೆ ರೂಪಿಸಿವೆ.
ಯೋಜನೆಗೆ ಬಿಬಿಎಂಪಿ ಮಂಜೂರಾತಿ ಸಿಕ್ಕಿದ್ದರಿಂದ ಮಲ್ಲೇಶ್ವರ ಭಾಗದ ನಿವಾಸಿಗಳು ಚಿಂತೆಗೀಡಾಗಿದ್ದಾರೆ. ಈಗಾಗಲೇ ಸಂಪಿಗೆ ರಸ್ತೆ ಸಂಚಾರ ದಟ್ಟಣೆ ಅನುಭವಿಸುತ್ತಿದ್ದು, ಅವಳಿ ಕಟ್ಟಡಗಳು ಬಂದರೆ ಸಮಸ್ಯೆ ಹೆಚ್ಚಲಿದೆ ಎಂದು ದೂರಿದ್ದಾರೆ.

ನಗರ ಯೋಜನೆಗಳ ತಜ್ಞ ವಿ.ರವಿಚಂದರ್ ಅವರನ್ನು ಸಂಪರ್ಕಿಸಿದಾಗ, `ಕಟ್ಟಡದ ನಿಯಮಾವಳಿ ಉಲ್ಲಂಘನೆ ಆಗದಂತೆ ಬಿಬಿಎಂಪಿ ಎಚ್ಚರ ವಹಿಸಬೇಕಿದೆ' ಎಂದು ಅಭಿಪ್ರಾಯಪಟ್ಟರು. `ಬಿಬಿಎಂಪಿ, ಬಿಎಂಆರ್‌ಸಿಎಲ್ ಮತ್ತು ಮಂತ್ರಿ ಸಂಸ್ಥೆ ನಡುವಿನ ವ್ಯವಹಾರ ಪಾರದರ್ಶಕವಾಗಿರಬೇಕು' ಎಂದು ಹೇಳಿದರು.

`ಖಾಸಗಿ ಸಹಭಾಗಿತ್ವ ಪಡೆಯುವಾಗ ಸರ್ಕಾರಿ ಸಂಸ್ಥೆಗಳ ಉದ್ದೇಶ ಒಳ್ಳೆಯದೇ ಆಗಿರಬಹುದು. ಆದರೆ, ಅಂತಿಮವಾಗಿ ಆ ಉದ್ದೇಶ ಈಡೇರುವುದು ಕಷ್ಟ. ಹಳೆಯ ತಪ್ಪುಗಳು ನಮಗೆ ಪಾಠವಾಗಬೇಕು' ಎಂದು ತಿಳಿಸಿದರು.

ಈ ಯೋಜನೆಯು ಆರಂಭದಿಂದಲೂ ವಿವಾದದಲ್ಲಿದೆ. 2 ಎಕರೆ 11 ಗುಂಟೆ ಜಾಗವನ್ನು ಅತಿಕ್ರಮಿಸಲಾಗಿದೆ ಎಂಬ ದೂರು ಬಂದಿದ್ದರಿಂದ ಬಿಬಿಎಂಪಿ ಯೋಜನೆಗೆ ಅನುಮತಿ ನೀಡಲು ಸಿದ್ಧವಿರಲಿಲ್ಲ. ಸಿದ್ದಯ್ಯ ಆಯುಕ್ತರಾಗಿದ್ದಾಗಲೂ ಈ ಯೋಜನೆಗೆ ಒಪ್ಪಿಗೆ ನೀಡಿರಲಿಲ್ಲ. ಈಗ ಯೋಜನೆಗೆ ಅನುಮತಿ ಸಿಕ್ಕಿದೆ. ಈ ನಿಲ್ದಾಣಕ್ಕೆ ಮಂತ್ರಿ ಸ್ಕ್ವೇರ್ ಸಂಪಿಗೆ ಮೆಟ್ರೊ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.