ADVERTISEMENT

ಮಕ್ಕಳನ್ನು ಕೊಂದು; ಆತ್ಮಹತ್ಯೆಗೆ ತಾಯಿ ಯತ್ನ

​ಪ್ರಜಾವಾಣಿ ವಾರ್ತೆ
Published 11 ಮೇ 2012, 19:30 IST
Last Updated 11 ಮೇ 2012, 19:30 IST

ಆನೇಕಲ್:  ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನಿಬ್ಬರು ಮಕ್ಕಳನ್ನು ಕೊಂದ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಬನ್ನೇರುಘಟ್ಟ ಠಾಣೆ ವ್ಯಾಪ್ತಿಯ ಮಂಟಪ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಶಂಕರ್ (3ವರ್ಷ) ಬಾಲಾಜಿ (8ತಿಂಗಳು) ಎಂದು ಗುರುತಿಸಲಾಗಿದೆ.  ತಾಯಿ ನಾಗ ಸುನೀತಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾಳೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ಭಾಸ್ಕರ್ ಮತ್ತು ನಾಗ ಸುನೀತಾ ದಂಪತಿ. ಹೆಂಡತಿ ನಾಗ ಸುನೀತಾ ಮಂಟಪ ಗ್ರಾಮದಲ್ಲಿನ ತನ್ನ ತಾಯಿಯ ಮನೆಗೆ ಒಂದು ವಾರದ ಹಿಂದೆ ಮಕ್ಕಳನ್ನು ಕರೆದುಕೊಂಡು ಬಂದಿದ್ದಳು.

ವಿವಾಹವಾದಾಗಿನಿಂದಲೂ ಗಂಡ ಹೆಂಡತಿಯರ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ.
ಇದೇ ತಿಂಗಳ ಏಳರಂದು ತಾಯಿಯು ಶಂಕರ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರೆ ಬಾಲಾಜಿಯನ್ನು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

7ರಂದು ಮಕ್ಕಳನ್ನು ಕೊಂದು ಶವಗಳನ್ನು ಊರ ಹೊರಗಿನ ನೀಲಗಿರಿ ತೋಪಿನಲ್ಲಿ ಎಸೆದಿದ್ದಾಳೆ. ಮಾರನೇ ದಿನ ಗೊಟ್ಟಿಗೆರೆಯಲ್ಲಿ ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಯಶಸ್ವಿಯಾಗಿರಲಿಲ್ಲ, ನಂತರ ಬೆಂಗಳೂರಿನ ಕುರುಬರ ಹಟ್ಟಿಯಲ್ಲಿ ಪರಿಚಯಸ್ಥರ ಮನೆಯ ಎರಡನೇ ಮಹಡಿಯಿಂದ ಬಿದ್ದು ಆತ್ನಹತ್ಯೆಗೆ ಯತ್ನಿಸಿದ್ದಳು ಎಂದು ಬನ್ನೇರುಘಟ್ಟ ಸಬ್ ಇನ್‌ಸ್ಪೆಕ್ಟರ್ ವಿಶ್ವನಾಥ್ ತಿಳಿಸಿದ್ದಾರೆ.

ನಾಗ ಸುನೀತಾ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂಬ ಸುದ್ದಿಯನ್ನು ಆಂಧ್ರದಲಿದ್ದ ಗಂಡ ಭಾಸ್ಕರ್ ತಿಳಿದ ಕೂಡಲೇ ಬೆಂಗಳೂರಿಗೆ ಬಂದು ಹೆಂಡತಿಯನ್ನು ಭೇಟಿಯಾಗಿ ನಂತರ ಮಂಟಪದಲ್ಲಿನ ಅತ್ತೆ ಮನೆಗೆ ಬಂದಿದ್ದಾರೆ. ಆಗ ಮಕ್ಕಳು ಕಾಣದಿದ್ದಾಗ ಮಕ್ಕಳು ಕಾಣೆಯಾಗಿವೆ ಎಂದು ಕರಪತ್ರ ಪ್ರಕಟಿಸಿ ಪೊಲೀಸರ ಗಮನಕ್ಕೂ ತರಲಾಗಿತ್ತು ಎಂದು ತಿಳಿದು ಬಂದಿದೆ.

ಶುಕ್ರವಾರ ನೀಲಗಿರಿ ತೋಪಿನಲ್ಲಿ ನಾಯಿಗಳು ಮೃತ ಶವಗಳನ್ನು ಎಳೆದಾಡುತ್ತ್ದ್ದಿದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.   ಬನ್ನೇರುಘಟ್ಟ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿಶ್ವನಾಥ್ ತನಿಖೆ ನಡೆಸಿದಾಗ ತಾಯಿಯೇ ಮಕ್ಕಳನ್ನು ಕೊಂದಿರುವುದು ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.