ADVERTISEMENT

ಮಕ್ಕಳಲ್ಲಿ ಓದಿನ ಅಭಿರುಚಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST
ಮಕ್ಕಳಲ್ಲಿ ಓದಿನ ಅಭಿರುಚಿ ಅಗತ್ಯ
ಮಕ್ಕಳಲ್ಲಿ ಓದಿನ ಅಭಿರುಚಿ ಅಗತ್ಯ   

ಬೆಂಗಳೂರು: `ಆಧುನಿಕ ಕಾಲಘಟ್ಟದ ಮಕ್ಕಳಿಗೆ ಶ್ರೇಷ್ಠ ವ್ಯಕ್ತಿಗಳ ಜೊತೆಗಿನ ಒಡನಾಟ ವಿರಳವಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಜಗತ್ತಿನ ಶ್ರೇಷ್ಠ ಮನಸ್ಸುಗಳ ಪರಿಚಯ ಮಾಡಿಕೊಡಬೇಕಿದೆ~ ಎಂದು ಹಿರಿಯ ವಿಮರ್ಶಕ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಅನಕೃ ಪ್ರತಿಷ್ಠಾನ ಹಾಗೂ ನಿರ್ಮಾಣ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಗರದ ಜೆ.ಎಸ್.ಎಸ್. ಮಹಾವಿದ್ಯಾಪೀಠದಲ್ಲಿ ಭಾನುವಾರ ನಡೆದ `ಅನಕೃ-ನಿರ್ಮಾಣ್ ಪ್ರಶಸ್ತಿ-2012~ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಪರಂಪರೆ ಹಾಗೂ ಆಧುನಿಕ ಸಾಹಿತ್ಯದ ಕುರಿತು ಸಮಗ್ರವಾಗಿ ಮಾತನಾಡಬಲ್ಲ ಬೆರಳೆಣಿಕೆಯ ಲೇಖಕರಲ್ಲಿ ಲಕ್ಷ್ಮಿನಾರಾಯಣ ಭಟ್ಟ ಅವರೂ ಒಬ್ಬರು. ಕನ್ನಡದ ಕಾವ್ಯವನ್ನು ಮತ್ತೆ ಜನರ ಬಳಿಗೆ ಕೊಂಡೊಯ್ದವರು~ ಎಂದು ಅವರು ಬಣ್ಣಿಸಿದರು.

`ಮಕ್ಕಳಿಗೆ ಬಾಲ್ಯದಿಂದಲೇ ಅನಕೃ, ಮಾಸ್ತಿ ಕೃತಿಗಳ ಓದಿನ ಅಭಿರುಚಿ ಮೂಡಿಸಬೇಕು~ ಎಂದರು.
ಪ್ರಶಸ್ತಿ ಸ್ವೀಕರಿಸಿದ ಹಿರಿಯ ಕವಿ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಮಾತನಾಡಿ, `ಇಂಗ್ಲಿಷ್‌ಗಿಂತ ಕನ್ನಡ ಭಾಷೆ ಪ್ರಾಚೀನವಾದುದು. ಭಾರತದಲ್ಲಿ ಸಂಸ್ಕೃತ ಹಾಗೂ ತಮಿಳು ಭಾಷೆಯನ್ನು ಹೊರತುಪಡಿಸಿದರೆ ಕನ್ನಡವೇ ಪ್ರಾಚೀನ ಭಾಷೆ~ ಎಂದರು.

ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಎನ್.ವಿಜಯ ಕುಮಾರ್, ಅನಕೃ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿ.ಲಕ್ಷ್ಮಿನಾರಾಯಣ್, ಪ್ರತಿಷ್ಠಾನದ ಕಾರ್ಯದರ್ಶಿ ಗೌತಮ್ ಅನಕೃ, ಪ್ರೊ.ಜಿ. ಅಶ್ವತ್ಥನಾರಾಯಣ, ಬಿಬಿಎಂಪಿ ಸದಸ್ಯ ಸೋಮಶೇಖರ್, ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಅವರ ಪತ್ನಿ ಜ್ಯೋತಿ ಉಪಸ್ಥಿತರಿದ್ದರು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಶೀಘ್ರ ಅನಕೃ ಸ್ಮಾರಕ ಭವನಕ್ಕೆ ಶಂಕುಸ್ಥಾಪನೆ
`ಕಾನೂನಿನ ಅಡೆತಡೆಗಳನ್ನು ಶೀಘ್ರದಲ್ಲೇ ನಿವಾರಿಸಿ ನಗರದ ಜೆ.ಪಿ.ನಗರದಲ್ಲಿ ಅನಕೃ ಸ್ಮಾರಕ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು~ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ ಕುಮಾರ್ ಭರವಸೆ ನೀಡಿದರು.

ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, `ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು~ ಎಂದು ಆಶ್ವಾಸನೆ ನೀಡಿದರು.

`ಭವನ ನಿರ್ಮಾಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾಗ ಮಂಜೂರು ಮಾಡಲಾಯಿತು. ಆದರೆ, ಸ್ಥಳೀಯರೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಈ ತಡೆಯಾಜ್ಞೆ ತೆರವುಗೊಳಿಸಿ ಪ್ರತಿಷ್ಠಾನಕ್ಕೆ ಜಾಗ ದೊರಕಿಸಿಕೊಡುವಂತೆ ಮಾಡಬೇಕು.
 
ಭವನ ನಿರ್ಮಾಣಕ್ಕೆ ಸರ್ಕಾರದ ಹಣಕಾಸಿನ ನೆರವು ಬೇಕಿಲ್ಲ. ಭವನದಲ್ಲಿ ಕನ್ನಡ ಲೇಖಕರ ಹಾಗೂ ಕವಿಗಳ ತೈಲ ಚಿತ್ರಗಳನ್ನು ಅಳವಡಿಸಿ ಅವರ ಸಾಧನೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶ ಇದೆ~ ಎಂದು ಅನಕೃ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ವಿ.ಲಕ್ಷ್ಮಿನಾರಾಯಣ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.