ADVERTISEMENT

ಮಕ್ಕಳಿಂದ ನೋವುಂಡ ಅಮ್ಮಂದಿರು

ಒಬ್ಬ ಪೊರಕೆಯಿಂದ ಹೊಡೆದರೆ, ಇನ್ನೊಬ್ಬ ತಾಯಿಗೆ ಬೆಂಕಿಯನ್ನೇ ಇಟ್ಟ!

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 18:43 IST
Last Updated 8 ಡಿಸೆಂಬರ್ 2018, 18:43 IST

ಬೆಂಗಳೂರು: ದುಷ್ಚಟಗಳನ್ನು ಬಿಡುವಂತೆ ಬುದ್ಧಿವಾದ ಹೇಳಿದ ತಾಯಿಗೆ 15 ವರ್ಷದ ಬಾಲಕ ಪೊರಕೆಯಿಂದ ಮನಸೋಇಚ್ಛೆ ಹೊಡೆದಿದ್ದರೆ, ಸದಾಶಿವನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಕುಡಿಯಲು ಹಣ ಕೊಡಲಿಲ್ಲವೆಂದು 23 ವರ್ಷದ ಯುವಕ ತಾಯಿ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ನಗರದ ಪ್ರತಿಷ್ಠಿತ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಬಾಲಕ, ಡಿ.1ರಂದು ತಾಯಿಗೆ ಪೊರಕೆಯಿಂದ ಹೊಡೆದಿದ್ದಾನೆ. ಅವರು ಅಳುತ್ತ ಅಂಗಲಾಚಿದರೂ ಕರುಣೆ ತೋರದೆ ಹಲ್ಲೆ ಮಾಡಿದ್ದಾನೆ. ಬಾಲಕನ ಅಕ್ಕ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೆತ್ತವಳ ಮೇಲೆ ಮಗ ತೋರಿರುವ ದರ್ಪ ಕಂಡು ಸಾರ್ವಜನಿಕರಿಂದ ಆತಂಕ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ತನ್ನ ವಯಸ್ಸಿನ ಹುಡುಗಿಯೊಬ್ಬಳ ಜತೆ ತಿರುಗಾಡುತ್ತಿದ್ದ ಬಾಲಕ, ಆಕೆಯೊಟ್ಟಿಗೆ ಸಲುಗೆಯಿಂದ ಇದ್ದಂತಹ ಕೆಲ ಫೋಟೊಗಳನ್ನು ಫೇಸ್‌ಬುಕ್‌ಗೆ ಹಾಕಿದ್ದ. ಈ ವಿಚಾರ ತಾಯಿಯ ಗಮನಕ್ಕೆ ಬಂದಿತ್ತು. ಇದರ ಬೆನ್ನಲ್ಲೇ ಆತ ಕೋಣೆಯಲ್ಲಿ ಸಿಗರೇಟ್ ಸೇದುತ್ತಿದ್ದನ್ನು ತಾಯಿ ನೋಡಿದ್ದರು. ದುಷ್ಚಟಗಳನ್ನು ಬಿಡುವಂತೆ ಬುದ್ಧಿ ಹೇಳಿದ್ದಕ್ಕೆ ದೊಣ್ಣೆಯಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ. ಇದರಿಂದ ಅವರ ಕಾಲು ಹಾಗೂ ಬೆನ್ನಿಗೆ ಗಾಯವಾಗಿದ್ದವು.

ADVERTISEMENT

‘ಕೆಲ ದಿನಗಳ ಹಿಂದೆ ನನ್ನ ತಂಗಿ ಮನೆಗೆ ಬಂದಿದ್ದಳು. ಮಗನಿಂದಾದ ಗಾಯಗಳನ್ನು ಆಕೆಗೆ ತೋರಿಸಿದ್ದೆ. ಅಷ್ಟಕ್ಕೇ ಆತ, ‘ನನ್ನ ಬಗ್ಗೆ ಯಾಕೆ ಎಲ್ಲರ ಹತ್ತಿರ ಮಾತಾಡುತ್ತೀಯಾ. ನನ್ನ ತಂಟೆಗೆ ಬಂದರೆ ಸರಿ ಇರುವುದಿಲ್ಲ’ ಎಂದು ಪೊರಕೆಯಿಂದ ಪುನಃ ಹೊಡೆದ. ಆ ದೃಶ್ಯ ಹೇಗೆ ಹೊರಗೆ ಹೋಯಿತೋ ಗೊತ್ತಿಲ್ಲ’ ಎಂದು ತಾಯಿ ಹೇಳಿದ್ದಾರೆ.

‘ಮಗ 7ನೇ ತರಗತಿ ಇದ್ದಾಗ ಹಾಸ್ಟೆಲ್‌ಗೆ ಬಿಟ್ಟಿದ್ದೆವು. ಆ ವಿಚಾರವನ್ನು ಈಗ ಪ್ರಸ್ತಾಪಿಸಿ ಜಗಳ ತೆಗೆಯುತ್ತಾನೆ. ಕೇಳಿದಾಗ ಹಣ ಕೊಡದಿದ್ದರೆ ಗಲಾಟೆ ಮಾಡಿ ಹೊಡೆಯುತ್ತಾನೆ. ಪತಿ ಬೇರೆ ಊರಿನಲ್ಲಿ ಕೆಲಸ ಮಾಡುತ್ತಾರೆ. ಅವರಿಗೂ ವಿಷಯ ಗೊತ್ತು. ಮಗ ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಕಣ್ಣೀರಿಟ್ಟರು.

ವಿಡಿಯೊದಲ್ಲೇನಿದೆ: ಬಾಲಕ ಪೊರಕೆಯಿಂದ ಹೊಡೆದಾಗ ತಾಯಿ ಚೀರಿಕೊಂಡು ಅಳುತ್ತಾರೆ. ಕೈಮುಗಿದು ಬೇಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಅಕ್ಕ, ‘ಅಮ್ಮ ನಿನ್ನ ಚಾಕರಿ ಮಾಡುವುದಲ್ಲದೆ, ನಿನ್ನಿಂದ ಇಷ್ಟೆಲ್ಲ ಅನುಭವಿಸಬೇಕೇ’ ಎಂದು ಪ್ರಶ್ನಿಸುತ್ತಾರೆ. ಆಗ ಸೋದರಿ ಮೇಲೂ ಎರಗುವ ಆತ, ‘ಇದು ನಿನಗೆ ಸಂಬಂಧಪಡುವ ವಿಚಾರವಲ್ಲ. ನಿನ್ನಂಥ ಎಷ್ಟೋ ಜನರನ್ನು ನೋಡಿದ್ದೇನೆ. ನೀನೆಲ್ಲ ನನಗೆ ಯಾವ ಲೆಕ್ಕ’‍ ಎನ್ನುತ್ತಾನೆ.

ಮಾಧ್ಯಮಗಳಲ್ಲಿ ವಿಡಿಯೊ ಪ್ರಸಾರ ಆಗುತ್ತಿದ್ದಂತೆಯೇ ಜೆ.ಪಿ.ನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಾಯಿ–ಮಗನನ್ನು ವಿಚಾರಣೆ ನಡೆಸಿದ್ದಾರೆ. ‘ಎಷ್ಟೇ ಆದರೂ ಆತ ನನ್ನ ಮಗ. ನಾವೇ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಆಪ್ತ ಸಮಾಲೋಚನೆ ಮಾಡಿಸಿ ಸರಿದಾರಿಗೆ ತರುತ್ತೇವೆ. ನೀವು ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಬೇಡ’ ಎಂದು ತಾಯಿ ಮನವಿ ಮಾಡಿದ್ದಾರೆ. ಹೀಗಾಗಿ, ಪೊಲೀಸರು ಆತನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ.

ಅಮ್ಮನಿಗೇ ಬೆಂಕಿ ಹಚ್ಚಿದ

ಕುಡಿಯಲು ಹಣ ಕೊಡಲಿಲ್ಲವೆಂದು ತನ್ನ ತಾಯಿ ಭಾರತಿ (52) ಅವರಿಗೆ ಬೆಂಕಿ ಹಚ್ಚಿದ್ದ ಉತ್ತಮ್ ಕುಮಾರ್ ಎಂಬಾತನನ್ನು ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭಾರತಿ ಅವರ ಮುಖ, ಎದೆ ಹಾಗೂ ಕೈ ಸುಟ್ಟು ಹೋಗಿದ್ದು, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೋಷಕರ ಜತೆ ಅಶ್ವತ್ಥನಗರದಲ್ಲಿ ನೆಲೆಸಿರುವ ಉತ್ತಮ್, ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಕೃತ್ಯ ಎಸಗಿದ್ದಾನೆ. ‌ಪತ್ನಿಯ ಚೀರಾಟ ಕೇಳಿ ತಕ್ಷಣ ನೆರವಿಗೆ ಧಾವಿಸಿದ ಅವರ ಪತಿ ಮಂಜುನಾಥ್, ಹೊದಿಕೆಯಿಂದ ಬೆಂಕಿ ನಂದಿಸಿದ್ದಾರೆ. ಸಂಜಯನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಹೊಯ್ಸಳ ವಾಹನದಲ್ಲೇ ಗಾಯಾಳುವನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.