ADVERTISEMENT

ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:20 IST
Last Updated 16 ಫೆಬ್ರುವರಿ 2011, 19:20 IST

ಮಹದೇವಪುರ:  ‘ಮಕ್ಕಳಿಗೆ ತಂದೆ- ತಾಯಿ ಅಕ್ಷರ ಕಲಿಸಿದರೆ ಸಾಲದು. ಬೆಳೆದು ದೊಡ್ಡವರಾಗುತ್ತಿದ್ದಂತೆ ಪ್ರತಿಭಾವಂತರಾಗುವ ನಿಟ್ಟಿನಲ್ಲಿ ಉತ್ತಮ ಮಾರ್ಗದರ್ಶನ ನೀಡಬೇಕು’ ಎಂದು ಬೆಂಗಳೂರು ಪೂರ್ವ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ ಹೇಳಿದರು.ವರ್ತೂರು ವಾರ್ಡ್ ವ್ಯಾಪ್ತಿಯ ಚಿಕ್ಕಬೆಳ್ಳಂದೂರು ಗ್ರಾಮದಲ್ಲಿರುವ ಕಾರ್ಮೆಲ್ ಕಾನ್ವೆಂಟ್ ಶಾಲೆಯ 27ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಪ್ರತಿಭಾವಂತರಾಗುವುದಷ್ಟೇ ಅಲ್ಲ, ಸಮಾಜದಲ್ಲಿ ಪ್ರತಿಯೊಬ್ಬರೂ ಗೌರವಿಸುವಂತಹ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು.ಹಾಗಾಗಲು ಪೂರಕವಾದ ವಾತಾವರಣವನ್ನು ಶಿಕ್ಷಕರು ಹಾಗೂ ಪಾಲಕರು ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

‘ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 100ರಷ್ಟು ಫಲಿತಾಂಶ ಬರುತ್ತಿರುವುದು ಹೆಮ್ಮೆಯ ಸಂಗತಿ.ಈ ಸಾಧನೆಯ ಹಿಂದೆ ಶಿಕ್ಷಕರ ಪರಿಶ್ರಮವಿದೆ.ಮುಂಬರುವ ವರ್ಷಗಳಲ್ಲಿಯೂ ಇದೇ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಅವರು ತಿಳಿಸಿದರು.

ಕೃಷ್ಣರಾಜಪುರ ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಡಯ್ಯ ಮಾತನಾಡಿ, ‘ತಂದೆ- ತಾಯಿ ಇಬ್ಬರೂ ಮಕ್ಕಳಿಗೆ ಅಕ್ಷರ ಕಲಿಸಲು ಶ್ರಮಿಸಬೇಕು. ಹಾಗಾದರೆ ಮುಂದೊಂದು ದಿನ ಆ ಮಕ್ಕಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಫಾದರ್ ಜಸ್ಟೀನ್ ಅವನೂಪರಂಬಿಲ್, ಫಾದರ್ ಥಾಮಸ್ ವಡಕ್ಕದತ್, ಶಾಲೆಯ ಆಡಳಿತ ಮಂಡಳಿಯ ವ್ಯವಸ್ಥಾಪಕರಾದ ಸಿಸ್ಟರ್ ಮೆರಿಟಾ, ಪ್ರಾಂಶುಪಾಲರಾದ ಸಿಸ್ಟರ್ ಮೆರ್ಸಿಲಿನ್, ರಾಮಕುಮಾರ್, ಅಭಿಜಿತ್, ಸ್ನೇಹಾ ಹಾಗೂ ಜೈಬಾ ಸುಲ್ತಾನ್ ಉಪಸ್ಥಿತರಿದ್ದರು. ಶಾಲೆಯ ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಕುರಿತಾದ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.