ADVERTISEMENT

ಮತೀಯ ಹಿಂಸೆ: ಮಸೂದೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಯಲಹಂಕ: ಕಾಂಗ್ರೆಸ್ ನೇತೃತ್ವ ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ಪ್ರಚೋದಿತ ಹಿಂಸಾಚಾರ ಮಸೂದೆಯನ್ನು ವಿರೋಧಿಸಿ ಯಲಹಂಕ ಮತ್ತು ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೋಗಿಲು ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪಿ.ಕೆ.ರಾಜಗೋಪಾಲ್, ದೇಶದ ಅನೇಕ ಪ್ರಮುಖ ರಾಜ್ಯಗಳಲ್ಲಿ ಮುಸ್ಲಿಂ ಮತಗಳು ಬಿಜೆಪಿ ಪರ  ವಾಲುತ್ತಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರನ್ನು ಹಿಂದೂಗಳಿಂದ ಪ್ರತ್ಯೇಕಿಸಿ ಸಮಾಜದಲ್ಲಿ ಒಡಕು ಮೂಡಿಸುವುದು ಹಾಗೂ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಅವರನ್ನು ಬಳಸಿಕೊಳ್ಳುವ ದುರುದ್ದೇಶದಿಂದ ಯುಪಿಎ ಸರ್ಕಾರ ಈ ಕಾಯಿದೆಯನ್ನು ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿದರು.

 ಬಿಬಿಎಂಪಿ ಸದಸ್ಯ ಅಶ್ವಥನಾರಾಯಣಗೌಡ ಮಾತನಾಡಿ, ಈ ಕಾಯಿದೆಯಿಂದ ಅಲ್ಪಸಂಖ್ಯಾತರಿಗೆ ಅನುಕೂಲವಿಲ್ಲದಿದ್ದರೂ ಹಿಂದೂಗಳಿಗೆ ಬಹಳ ತೊಂದರೆಯಾಗಲಿದೆ. ಅಲ್ಲದೆ ದಲಿತರಿಗೆ ಕೊಟ್ಟಿದ್ದ ಮೀಸಲಾತಿಯನ್ನು ಹಿಂದಕ್ಕೆ ಪಡೆದು ಅಲ್ಪಸಂಖ್ಯಾತರಿಗೆ ನೀಡುವ ಹುನ್ನಾರ ನಡೆಯುತ್ತಿದ್ದು, ಇದರಿಂದ ದಲಿತರಿಗೆ ಬಹಳ ಅನ್ಯಾಯವಾಗಲಿದೆ ಎಂದರು.

ಯಲಹಂಕ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿಬ್ಬೂರು ಜಯಣ್ಣ, ಯಲಹಂಕ ಹಾಗೂ ಬ್ಯಾಟರಾಯನಪುರ ಕ್ಷೇತ್ರಗಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ವಿ.ಬಾಬು, ಎನ್.ಟಿ.ಮಹೇಶ್, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್, ಬ್ಯಾಟರಾಯನಪುರ ಕ್ಷೇತ್ರ ಎಸ್‌ಸಿ-ಎಸ್‌ಟಿ ಮೋರ್ಚಾ ಅಧ್ಯಕ್ಷ ಮುನಿಹನುಮಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಸುರೇಶ್ ಮೊದಲಾದವರು ಭಾಗವಹಿಸಿದ್ದರು.

ಅವಿರೋಧ ಆಯ್ಕೆ: ಬೆಟ್ಟಹಲಸೂರು ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಸುಮಿತ್ರಮ್ಮ ರಾಜಣ್ಣ ಅವಿರೋವಾಗಿ ಆಯ್ಕೆಯಾಗಿದ್ದಾರೆ.

 ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಿತ್ರಮ್ಮ ಅವರೊಬ್ಬರೇ ನಾಮಪತ್ರ ಸಲ್ಲಿಸಿದರು. ಇದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಚುನಾವಣಾಧಿಕಾರಿಯಾಗಿ ಬಿ.ಅನಂತ ಕಾರ್ಯನಿರ್ವ ಹಿಸಿದರು. 

  ಜಿ.ಪಂ.ಸದಸ್ಯ ಕೆ.ಅಶೋಕನ್, ಗ್ರಾ.ಪಂ.ಅಧ್ಯಕ್ಷ ಆಂಜಿನಪ್ಪ, ಮಾಜಿ ಅಧ್ಯಕ್ಷರಾದ ಬಿ.ಕೆ. ಮಂಜುನಾಥಗೌಡ, ನಾರಾಯಣಗೌಡ, ಕೆ.ಶ್ರೀನಿವಾಸಯ್ಯ, ಮಾಜಿ ಉಪಾಧ್ಯಕ್ಷೆ ಡಿ.ಬಿ. ಸುಮಿತ್ರಾ ಶಿವರಾಜ್, ಬೆಂಗಳೂರು ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಟಿ.ಎಂ.ಶ್ರೀರಾಂ ಹಾಗೂ ಗ್ರಾ.ಪಂ.ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದು, ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.