ADVERTISEMENT

ಮತ್ತೆ ಯಾತ್ರೆಗೆ ಕೈ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 18:30 IST
Last Updated 23 ಆಗಸ್ಟ್ 2012, 18:30 IST

ಬೆಂಗಳೂರು: ಪಕ್ಷ ಸಂಘಟನೆಗಾಗಿ ಕೆಪಿಸಿಸಿ ರೂಪಿಸಿರುವ `ಕಾಂಗ್ರೆಸ್‌ಗೆ ಬನ್ನಿ- ಬದಲಾವಣೆ ತನ್ನಿ~ ಎಂಬ ಕಾರ್ಯಕ್ರಮವನ್ನು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು 1999ರಲ್ಲಿ ಕೈಗೊಂಡಿದ್ದ `ಪಾಂಚಜನ್ಯ~ ಯಾತ್ರೆ ಮಾದರಿಯಲ್ಲಿ ನಡೆಸಲು ಬುಧವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

`ಶಂಖನಾದ~ ಅಥವಾ `ದಶ ಅಶ್ವಮೇಧ~ ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಸಂಘಟಿಸಲು ಯೋಚಿಸಲಾಗಿದೆ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೋಟಾರು ಬೈಕ್ ರ‌್ಯಾಲಿ, ಸೈಕಲ್ ರ‌್ಯಾಲಿ ನಡೆಸುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರ‌್ಯಾಲಿಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯ ಮಟ್ಟದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ರೈತರು ಮತ್ತು ಮಹಿಳೆಯರ ಪ್ರತ್ಯೇಕ ಸಮಾವೇಶಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ವಿಭಾಗಗಳಲ್ಲಿ ಈ ಸಮಾವೇಶಗಳನ್ನು ನಡೆಸುವುದು ಸೂಕ್ತ ಎಂಬ ಚರ್ಚೆ ಸಭೆಯಲ್ಲಿ ನಡೆದಿದೆ.

ಬರ ಪ್ರವಾಸಕ್ಕೆ ನಾಲ್ಕು ತಂಡ:
ನಾಲ್ಕು ತಂಡಗಳಲ್ಲಿ ಬರಪೀಡಿತ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ. ಪರಮೇಶ್ವರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಒಂದೊಂದು ತಂಡಗಳ ನೇತೃತ್ವ ವಹಿಸುತ್ತಾರೆ. ಇನ್ನೊಬ್ಬ ಹಿರಿಯ ನಾಯಕರ ನೇತೃತ್ವದಲ್ಲಿ ನಾಲ್ಕನೇ ತಂಡವನ್ನು ಪ್ರವಾಸಕ್ಕೆ ಕಳುಹಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ವಿಧಾನಸಭಾ ಚುನಾವಣೆಗೆ ಸಿದ್ಧತೆ ಚುರುಕುಗೊಳಿಸಲು ಎಐಸಿಸಿ ಮತ್ತು ಕೆಪಿಸಿಸಿಯಿಂದ ಪ್ರತ್ಯೇಕ ವೀಕ್ಷಕರ ತಂಡಗಳನ್ನು ವಿಧಾನಸಭಾ ಕ್ಷೇತ್ರಗಳಿಗೆ ಕಳುಹಿಸಿ ಸಮೀಕ್ಷೆ ನಡೆಸಲು ಚಿಂತನೆ ನಡೆದಿದೆ.
ಚುನಾವಣಾ ಪ್ರಚಾರ ಸಮಿತಿ ಹಾಗೂ ಪ್ರಣಾಳಿಕೆ ರಚನೆ ಸಮಿತಿಗಳನ್ನು ತಕ್ಷಣವೇ ರಚಿಸಬೇಕೆಂಬ ತೀರ್ಮಾನವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.