ADVERTISEMENT

ಮತ್ತೆ ಶುರುವಾಯ್ತು ಫ್ಲೆಕ್ಸ್‌ ಹಾವಳಿ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:06 IST
Last Updated 24 ಮೇ 2018, 19:06 IST
ಎಂ.ಜಿ. ರಸ್ತೆಯಲ್ಲಿ ಜೆಡಿಎಸ್‌, ಕಾಂಗ್ರೆಸ್ ಪಕ್ಷದ ಫ್ಲೆಕ್ಸ್‌
ಎಂ.ಜಿ. ರಸ್ತೆಯಲ್ಲಿ ಜೆಡಿಎಸ್‌, ಕಾಂಗ್ರೆಸ್ ಪಕ್ಷದ ಫ್ಲೆಕ್ಸ್‌   

ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜನ್ಮದಿನ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ ಅಭ್ಯರ್ಥಿಗಳಿಗೆ ಶುಭಾಶಯ ಕೋರುವ ಬ್ಯಾನರ್‌, ಫ್ಲೆಕ್ಸ್‌ಗಳು ನಗರದಾದ್ಯಂತ ಕಣ್ಣಿಗೆ ರಾಚುತ್ತಿದ್ದು, ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ.

ಪ್ರಮಾಣವಚನದ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಎಚ್‌.ಡಿ ಕುಮಾರಸ್ವಾಮಿ ಮತ್ತು ಪರಮೇಶ್ವರ ಸೇರಿದಂತೆ ಅನೇಕ ನಾಯಕರಿಗೆ ಶುಭಾಶಯ ಕೋರುವ ಬ್ಯಾನರ್‌, ಫ್ಲೆಕ್ಸ್‌ ಮತ್ತು ಬಂಟಿಂಗ್ಸ್‌ಗಳು ಬುಧವಾರ ರಾರಾಜಿಸುತ್ತಿದ್ದವು.

‘ಶುಭಾಶಯ ಕೋರುವ ಬ್ಯಾನರ್, ಕಟೌಟ್‌, ಬಂಟಿಂಗ್ಸ್‌ ಮತ್ತು ಪಟಾಕಿಗಳನ್ನು ಸಿಡಿಸಬಾರದು. ಅವುಗಳು ಪರಿಸರಕ್ಕೆ ಹಾನಿಕರ. ಪಕ್ಷದ ಕಾರ್ಯಕರ್ತರು ಅವುಗಳನ್ನು ಅಳವಡಿಸುವುದಿಲ್ಲ ಎನ್ನುವ ಆಶಯ ನನ್ನದಾಗಿದೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು.

ADVERTISEMENT

ಹೀಗೆ ಹೇಳಿದ್ದರೂ ಅದಕ್ಕೆ ಕಿವಿಗೊಡದ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ನಗರದಾದ್ಯಂತ ನೂರಾರು ಕಟೌಟ್‌ಗಳನ್ನು ಹಾಕಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

‘ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಬ್ಯಾನರ್‌ಗಳು, ಫಲಕಗಳು ಇಲ್ಲದೇ ಇರುವುದರಿಂದ ನಗರ ಸುಂದರವಾಗಿ ಕಾಣುತ್ತಿತ್ತು. ಚುನಾವಣೆ ಮುಗಿದ ಮೇಲೆ ನಗರದ ಸೌಂದರ್ಯಕ್ಕೆ ಮತ್ತೆ ಕುಂದು ಬಂದಿದೆ’ ಎಂದು ನಗರದ ನಿವಾಸಿ ಹರೀಶ್‌ ಜಿ.ಎ ತಿಳಿಸಿದರು.

‘ಬ್ಯಾನರ್‌ಗಳಿಂದಾಗಿ ದೊಡ್ಡ ಪ್ರಮಾಣದ ಕಸ ಸಂಗ್ರಹವಾಗುತ್ತಿದೆ. ನಗರವನ್ನು ಸ್ವಚ್ಛವಾಗಿಡಲು ಬ್ಯಾನರ್‌ಗಳ ಮೇಲೆ ನಿರ್ಬಂಧ ಹೇರಬೇಕು’ ಎಂದು ದಾಸರಹಳ್ಳಿ ನಿವಾಸಿ ಮನೋಜ್‌ ರೈ ಹೇಳಿದರು.

ದೊಡ್ಡ ಪ್ರಮಾಣದ ವಹಿವಾಟು: ಚುನಾವಣೆಯ ಫಲಿತಾಂಶದ ಬಳಿಕ ನಗರ ಮೂಲದ ಡಿಜಿಟಲ್‌ ಪ್ರಿಂಟರ್‌ಗಳ ವಹಿವಾಟಿನಲ್ಲಿ ಏರಿಕೆಯಾಗಿದೆ.  ವಿವಿಧ ಪಕ್ಷದ ಕಾರ್ಯಕರ್ತರಿಂದ ಮತ್ತು ಜಯಗಳಿಸಿದ ಅಭ್ಯರ್ಥಿಗಳಿಂದ 15ರಿಂದ 20ಕ್ಕೂ ಹೆಚ್ಚು ಪ್ರಿಂಟಿಂಗ್‌ ಆರ್ಡರ್‌ಗಳು ಬಂದಿವೆ ಎನ್ನುತ್ತಾರೆ ಫ್ಲೆಕ್ಸ್‌ ಪ್ರಿಂಟರ್‌ ಮಾಲೀಕರೊಬ್ಬರು.

‘ಬ್ಯಾನರ್‌ ತಯಾರಿಕೆ ದರ ಅದರ ಗಾತ್ರದ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿನಿತ್ಯ ನಾವು ₹35 ಸಾವಿರದ ತನಕ ವಹಿವಾಟು ನಡೆಸುತ್ತಿದ್ದೇವೆ’ ಎನ್ನುತ್ತಾರೆ ದಾಸರಹಳ್ಳಿ ಪ್ರಿಂಟರ್‌ವೊಬ್ಬರು.

(ಹಡ್ಸನ್‌ ವೃತ್ತದ ಬಳಿ ಫ್ಲೆಕ್ಸ್‌ಗಳ ರಾಶಿ ಬುಧವಾರ ಕಂಡುಬಂತು– ಪ್ರಜಾವಾಣಿ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.