ADVERTISEMENT

ಮದುವೆಗೆ ಹೋಗಬೇಕಿದ್ದವ ಮಸಣಕ್ಕೆ...

ಕಾರು ಅಪಘಾತ: ಮೃತರ ಸಂಬಂಧಿಗಳ ರೋದನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:55 IST
Last Updated 16 ಜುಲೈ 2013, 19:55 IST

ಬೆಂಗಳೂರು: `ಮದುವೆಯಾಗಬೇಕಿದ್ದ ರಾಜನಾಯಕ್, ಯಾರದ್ದೋ ತಪ್ಪಿಗೆ ಈಗ ಶವವಾಗಿದ್ದಾನೆ. ಹಣ ಸಂಪಾದನೆಗೆಂದು ನಗರಕ್ಕೆ ಬಂದಿದ್ದ ಆತನ ಸಾವಿನ ಸುದ್ದಿಯನ್ನು ಇನ್ನೂ ನನ್ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ' ಎಂದು ಹೊಸ ರೋಡ್ ಜಂಕ್ಷನ್‌ನ ತರಕಾರಿ ವ್ಯಾಪಾರಿ ರಾಜಗೋಪಾಲ್ ಗದ್ಗದಿತರಾದರು.

`ರಾಜನಾಯಕ್‌ಗೆ ಕೆಲ ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಮುಂದಿನ ಬದುಕಿನ ಬಗ್ಗೆ ಆತ ಅಪಾರ ಕನಸು ಕಟ್ಟಿಕೊಂಡಿದ್ದ. ಈಗ ಆತನ ಸಾವಿನೊಂದಿಗೆ ಆ ಕನಸುಗಳೂ ಕೊನೆಯಾಗಿವೆ' ಎಂದು ಅವರು ಹೇಳಿದರು.

`ಹಿರಿಯೂರಿನ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್ ನಾಲ್ಕು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಇಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅವರು ತಮ್ಮ ಇಬ್ಬರು ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂದು ಹೇಳಿಕೊಳ್ಳುತ್ತಿದ್ದರು. ಇನ್ನು ಅವರ ಆಸೆ ಈಡೇರಿಸುವುದು ಯಾರು' ಎನ್ನುವಾಗ ಅವರ ಕಣ್ಣುಗಳು ತೇವಗೊಂಡವು.

`ರಾತ್ರಿ 10 ಗಂಟೆಗೆ ಮಳಿಗೆ ಮುಚ್ಚಿ ಮನೆಗೆ ಹೋಗಿದ್ದೆ. ಮನೆಗೆ ಹೋದ ಸುಮಾರು 20 ನಿಮಿಷದೊಳಗೆ ಅಪಘಾತದ ಸುದ್ದಿ ತಿಳಿಯಿತು. ಸ್ಥಳಕ್ಕೆ ಹೋಗಿ ನೋಡಿದಾಗ ಪಾದಚಾರಿ ಮಾರ್ಗದ ಮೇಲೆ ರಕ್ತ ಚೆಲ್ಲಾಡಿತ್ತು. ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡ ವಾಹನ ಮರಕ್ಕೆ ಡಿಕ್ಕಿ ಹೊಡೆದು ನಿಂತಿತ್ತು. ಗಾಯಗೊಂಡವರನ್ನು ಅದಾಗಲೇ ಆಸ್ಪತ್ರೆಗೆ ದಾಖಲಿಸಿದ್ದರು' ಎಂದು ತಿಳಿಸಿದರು.

ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯ ರಾಜನಾಯಕ್ ಮತ್ತು ವಿಜಯ್‌ಕುಮಾರ್, ಪರಪ್ಪನ ಅಗ್ರಹಾರ ಸಮೀಪದ ಬಸಾಪುರದಲ್ಲಿ ನೆಲೆಸಿದ್ದರು. ಅವರು ಹೊಸ ರೋಡ್ ಬಳಿಯ ಪಾದಚಾರಿ ಮಾರ್ಗದಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು.

`ನಾವು ಬಸ್ ನಿಲ್ದಾಣದ ಕಡೆಗೆ ನಡೆದು ಹೋಗುತ್ತಿದ್ದೆವು. ಜೋರಾಗಿ ಬಂದ ವಾಹನ ನೋಡನೋಡುತ್ತಿದ್ದಂತೆ ಪತ್ನಿ ಹಾಗೂ ಪುಷ್ಪರಾಣಿ ಅವರಿಗೆ ಡಿಕ್ಕಿ ಹೊಡೆಯಿತು. ಪತ್ನಿಯ ದೇಹ ಮೇಲಕ್ಕೆ ಹಾರಿ ಕೆಳಗೆ ಬಿತ್ತು. ಕಣ್ಣ ಎದುರೇ ಆಕೆಯ ಮೇಲೆ ವಾಹನ ಹರಿಯಿತು. ಪುಷ್ಪರಾಣಿ ಅವರ ಮಗ ಶ್ರೀನಿವಾಸ್‌ಗೆ ಸೆಪ್ಟೆಂಬರ್ 9ರಂದು ವಿವಾಹ ನಿಗದಿಯಾಗಿತ್ತು. ಮಗನ ಮದುವೆಯನ್ನು ನೋಡುವ ತಾಯಿಯ ಆಸೆ ಈಡೇರದೇ ಹೋಯಿತು' ಎಂದು ಇಂದ್ರಾಣಿ ಅವರ ಪತಿ ಗೋವಿಂದರಾಜು ಕಣ್ಣೀರಿಟ್ಟರು.

ಗಾಯಾಳು ಜನಕರಾಜು ಅವರ ತಂಗಿಯಾದ ಇಂದ್ರಾಣಿ ಅವರು ಚನ್ನಕೇಶವ ನಗರ ನಿವಾಸಿ. ಜನಕರಾಜು ಮತ್ತು ಪುಷ್ಪರಾಣಿ ದಂಪತಿ ಮಗನ ಮದುವೆಯ ಆಮಂತ್ರಣ ಪತ್ರಿಕೆ ಕೊಡುವ ಉದ್ದೇಶದಿಂದ ಇಂದ್ರಾಣಿ ಅವರ ಮನೆಗೆ ಬಂದಿದ್ದರು.

ದಂಪತಿ, ಆಮಂತ್ರಣ ಪತ್ರಿಕೆ ಕೊಟ್ಟು ಸೇಲಂಗೆ ಹೋಗಲು ಹೊಸೂರು ರಸ್ತೆಯ ಬಸ್ ನಿಲ್ದಾಣಕ್ಕೆ ನಡೆದು ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಜನಕರಾಜು ಅವರನ್ನು ಹೊರತುಪಡಿಸಿ ಇತರೆ ಗಾಯಾಳುಗಳೆಲ್ಲಾ ಪರಪ್ಪನ ಅಗ್ರಹಾರ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು.

ವಿಶೇಷ ತಂಡ ರಚನೆ
`ಘಟನೆ ವೇಳೆ ಕೃಷ್ಣಪ್ಪ ಅವರು ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದರೆ ಎಂಬುದು ಗೊತ್ತಾಗಿಲ್ಲ. ಅವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರವಷ್ಟೇ ಆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಕೃಷ್ಣಪ್ಪ ಅವರ ಪತ್ತೆಗೆ ಆಗ್ನೇಯ ಸಂಚಾರ ಉಪ ವಿಭಾಗದ ಎಸಿಪಿ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳ ಸಿಬ್ಬಂದಿಯು ಆರೋಪಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ'.
-ಬಿ.ದಯಾನಂದ, ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.