ADVERTISEMENT

ಮದುವೆ ಆಗಬೇಡ ಎಂದ ಅಕ್ಕನನ್ನೇ ಕೊಂದ!

ಸೋದರಿಯನ್ನು ಮುಗಿಸಿ, ಹಸೆಮಣೆ ಏರುವ ತಯಾರಿಯಲ್ಲಿದ್ದ ಆರೋಪಿ ಶಿವಕುಮಾರ್ ಜೈಲು ಪಾಲು

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:42 IST
Last Updated 8 ಜುಲೈ 2017, 19:42 IST
ಮಹಾಲಕ್ಷ್ಮಿ
ಮಹಾಲಕ್ಷ್ಮಿ   

ಬೆಂಗಳೂರು:  ‘ಮದುವೆ ಆಗಬೇಡ’ ಎಂಬ ಷರತ್ತು ವಿಧಿಸಿದ್ದಕ್ಕೆ ಕುತ್ತಿಗೆ ಬಿಗಿದು ಅಕ್ಕನನ್ನೇ ಹತ್ಯೆಗೈದ ಶಿವಕುಮಾರ್ (29) ಎಂಬುವರು, ಮರಣೋತ್ತರ ಪರೀಕ್ಷೆ ವರದಿ ನೀಡಿದ ಸುಳಿವಿನಿಂದ ಪೊಲೀಸರ ಬಲೆಗೆ ಬಿದ್ದು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಸಿಟಿ ಮಾರ್ಕೆಟ್ ಸಮೀಪದ ಅಂಚೆಪೇಟೆ ನಿವಾಸಿಯಾದ ಶಿವಕುಮಾರ್, ಜೂನ್ 28ರಂದು ಅಕ್ಕ ಮಹಾಲಕ್ಷ್ಮಿ (28) ಅವರನ್ನು ಕೊಂದಿದ್ದರು. ಅಲ್ಲದೇ, ಅದು ‘ಸಹಜ ಸಾವು’ ಎಂದು ಬಿಂಬಿಸುವುದಕ್ಕೆ ನಾನಾ ಕಸರತ್ತುಗಳನ್ನೂ ನಡೆಸಿದ್ದರು.

ಆದರೆ, ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಕೊಟ್ಟ ವೈದ್ಯಕೀಯ ವರದಿಯು ಸಾವಿನ ರಹಸ್ಯ ಬಯಲು ಮಾಡಿತು. ಆ ವರದಿ ಕೈಸೇರಿದ ಬಳಿಕ ಪೊಲೀಸರು ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಹಿಂದಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ.

ADVERTISEMENT

‘ಇದ್ದಷ್ಟೂ ದಿನವೂ ಹೊರೆ’: ‘ಆರು  ವರ್ಷಗಳ ಹಿಂದೆ ಅಮ್ಮ ಅನಾರೋಗ್ಯದಿಂದ ಮೃತಪಟ್ಟರು. ಅವರ ಸಾವಿನ ಆಘಾತದಲ್ಲಿದ್ದ ಅಕ್ಕ, ದಿನ ಕಳೆದಂತೆ ಅದೇ ನೋವಿನಲ್ಲಿ ಖಿನ್ನತೆಗೆ ಒಳಗಾದಳು. ಮನೆಯಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಬಿಸಾಡುತ್ತ, ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ, ಮಾನಸಿಕ ಅಸ್ವಸ್ಥೆಯಂತೆ ವರ್ತಿಸಲು ಆರಂಭಿಸಿದಳು’ ಎಂದು ಶಿವಕುಮಾರ್ ಹೇಳಿಕೆ ನೀಡಿದ್ದಾರೆ. 

‘ಅಕ್ಕನನ್ನು ನೋಡಿಕೊಳ್ಳಲು ನಾನು ಅಥವಾ ಅಪ್ಪ ಇರಲೇಬೇಕಿತ್ತು. ಒಂದು ಕ್ಷಣ ಒಂಟಿಯಾಗಿ ಬಿಟ್ಟರೂ, ಏನಾದರೊಂದು ಅನಾಹುತ ಮಾಡಿರುತ್ತಿದ್ದಳು. ಮಾನಸಿಕ ಕಾಯಿಲೆ ಸಂಬಂಧ ಹಲವು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಿರಲಿಲ್ಲ.’

‘ನಾನು ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ, ಕೆಲಸಕ್ಕೆ ಹೋಗದೆ ತನ್ನೊಂದಿಗೇ ಇರುವಂತೆ ಅಕ್ಕ ತಾಕೀತು ಮಾಡಿದ್ದಳು. ಇಷ್ಟು ವರ್ಷ ಆಕೆಯ ಸೇವೆಯಲ್ಲೇ ಮುಳುಗಿ ಹೋಗಿದ್ದ ನನಗೆ, ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಯಿತು. ಕ್ರಮೇಣ ಅಕ್ಕನ ಮೇಲೆ ವಿಪರೀತ ಸಿಟ್ಟು ಬರಲಾರಂಭಿಸಿತು. ಇದ್ದಷ್ಟು ದಿನವೂ ಈಕೆ ನಮಗೆ ಹೊರೆಯೇ ಆಗುತ್ತಾಳೆಂದು ಕೊಲೆ ಮಾಡಲು ನಿರ್ಧರಿಸಿದೆ.’

‘ಜೂನ್ 28ರ ಮಧ್ಯಾಹ್ನ 2 ಗಂಟೆಗೆ ಅಕ್ಕ ಕೋಣೆಯಲ್ಲಿ ಮಲಗಿದ್ದಳು. ಆಗ ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆಗೈದಿದ್ದೆ.  ನಂತರ ಆ ವೈರನ್ನು ಅಲ್ಮೆರಾದಲ್ಲಿ ಬಚ್ಚಿಟ್ಟು ಮನೆಯಿಂದ ಹೊರ ಹೋಗಿದ್ದೆ’ ಎಂದು ಶಿವಕುಮಾರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಸಂಜೆ 6 ಗಂಟೆ ಸುಮಾರಿಗೆ ತಂದೆ ನಂಜುಂಡಪ್ಪ ಅವರು ಮಗಳಿಗೆ ಕಾಫಿ ಕುಡಿಸಲು ಆ ಕೋಣೆಗೆ ತೆರಳಿದ್ದರು. ಎದ್ದೇಳಿಸಲು ಎಷ್ಟೇ ಪ್ರಯತ್ನಿಸಿದರೂ, ಪ್ರತಿಕ್ರಿಯೆ ಬರದಿದ್ದಾಗ ಗಾಬರಿಯಿಂದ ಮಗ ಶಿವಕುಮಾರ್‌ಗೆ ಕರೆ ಮಾಡಿದ್ದರು. ತಕ್ಷಣ ಮನೆಗೆ ಬಂದ ಅವರು, ಏನೂ ಗೊತ್ತಿಲ್ಲದವರಂತೆ ನಟಿಸಿದ್ದರು. ಅಲ್ಲದೆ, ಸ್ನೇಹಿತನ ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಹಾಲಕ್ಷ್ಮಿ ಕೊನೆಯುಸಿರೆಳೆದಿರುವುದನ್ನು ದೃಢಪಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಅಂತ್ಯಕ್ರಿಯೆ ಮುಗಿಯಿತು: ಮಹಾಲಕ್ಷ್ಮಿ ಸಾವಿನ ಕುರಿತು ಆಸ್ಪತ್ರೆಯಿಂದ ಅದೇ ದಿನ ರಾತ್ರಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಮೆಮೋ ಹೋಯಿತು. ಜೂನ್ 30ರಂದು ತಂದೆ ನಂಜುಂಡಪ್ಪ ಸಹ ಠಾಣೆಗೆ ತೆರಳಿ, ಮಗಳ ಸಾವಿನ ಬಗ್ಗೆ ಮಾಹಿತಿ ನೀಡಿ ಬಂದಿದ್ದರು.

‘ಸಹಜ ಸಾವು’ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದರು. ಇತ್ತ ಕುಟುಂಬ ಸದಸ್ಯರು ಮರುದಿನ ಸಂಜೆ ಅಂತ್ಯಕ್ರಿಯೆ ಪೂರ್ಣಗೊಳಿಸಿದ್ದರು.

***

ಸತ್ಯ ಹೊರ ಹಾಕಿದ ವರದಿ

ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು, ‘ಮಹಾಲಕ್ಷ್ಮಿ ಅವರದ್ದು ಸಹಜ ಸಾವಲ್ಲ. ಕುತ್ತಿಗೆ ಬಿಗಿದಿರುವುದರಿಂದ ಉಸಿರಾಡಲು ಸಾಧ್ಯವಾಗದೆ ಸಾವಿಗೀಡಾಗಿದ್ದಾರೆ. ಯಾರೋ ಕೊಲೆ ಮಾಡಿರುವ ಸಾಧ್ಯತೆ ಇದೆ’ ಎಂಬ ಆಘಾತಕಾರಿ ವರದಿಯನ್ನು ಶುಕ್ರವಾರ ಪೊಲೀಸರಿಗೆ ನೀಡಿದರು.

‘ವರದಿ ಬಂದ ಬಳಿಕ ಮೃತರ ತಂದೆ ಹಾಗೂ ತಮ್ಮನನ್ನು ವಿಚಾರಣೆ ನಡೆಸಿದೆವು. ಶಿವಕುಮಾರ್ ಅವರ ಹಣೆಯಲ್ಲಿ ಬೆವರು ಇಳಿಯುತ್ತಿತ್ತು. ತೊದಲುತ್ತಾ  ಉತ್ತರ ನೀಡುತ್ತಿದ್ದ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ‘ಅಕ್ಕನನ್ನು ಕೊಂದಿದ್ದು ನಾನೇ’ ಎಂದು ಒಪ್ಪಿಕೊಂಡು ಜೋರಾಗಿ ಅಳಲಾರಂಭಿಸಿದರು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮದುವೆ ಆಗದಂತೆ ಷರತ್ತು’
‘ಅಕ್ಕನಿಂದಾಗಿಯೇ ನಾನು ಕೆಲಸ ಬಿಟ್ಟಿದ್ದೆ. ಈ ಮಧ್ಯೆ ಆಕೆ, ‘ನಾನೂ ಮದುವೆಯಾಗಿಲ್ಲ. ನೀನು ಸಹ ಮದುವೆ ಆಗಬಾರದು. ನೀನು ವಿವಾಹವಾಗಿ ಹೆಂಡತಿ ಜತೆ ಬೇರೆ ಮನೆ ಮಾಡಿದರೆ, ನನ್ನನ್ನು ಹಾಗೂ ಅಪ್ಪನನ್ನು ನೋಡಿಕೊಳ್ಳುವವರು ಇಲ್ಲದಂತಾಗುತ್ತದೆ’ ಎಂಬ ಷರತ್ತು ವಿಧಿಸಿದ್ದಳು.

ಈಗಾಗಲೇ ಆಕೆಗೋಸ್ಕರ ಎಲ್ಲ ಸುಖವನ್ನೂ ಕಳೆದುಕೊಂಡಿದ್ದ ನನಗೆ, ಆ ಮಾತು ಮತ್ತಷ್ಟು ಕೆರಳಿಸಿತು. ಹೀಗಾಗಿ ಹತ್ಯೆಗೈದೆ’ ಎಂದು ಶಿವಕುಮಾರ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.