ADVERTISEMENT

ಮನುಷ್ಯ ಮನುಷ್ಯನನ್ನು ಗೌರವಿಸುವಂತಾಗಬೇಕು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 19:15 IST
Last Updated 17 ಫೆಬ್ರುವರಿ 2011, 19:15 IST

ಬೆಂಗಳೂರು:  ‘ಭವ್ಯ ಸಂಸ್ಕೃತಿ ಎಂದು ಹೇಳುತ್ತಿರುವ ಭಾರತದಲ್ಲಿ ಇಷ್ಟು ವರ್ಷಗಳಾದರೂ ಜಾತಿ ಪದ್ಧತಿಯನ್ನು ಅಳಿಸುವುದಾಗಿಲ್ಲ. ವರ್ಣಾಶ್ರಮ ಪದ್ಧತಿ ಇನ್ನೂ ಹೋಗಿಲ್ಲ.ಮನುಷ್ಯರನ್ನು ಮೃಗವಾಗಿ ಕಾಣಲಾಗುತ್ತಿದೆಯೇ ಎಂಬ ಸಂದೇಹ ಇದರಿಂದ ಮೂಡುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ನುಡಿದರು.

ನಗರದ ಅರಮನೆ ಮೈದಾನದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ಎಂಟನೇ ದಿನವಾದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಘಟನೆಗಳ ಹಿನ್ನೆಲೆಯಲ್ಲಿ ಸಮಾಜ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಈ ವ್ಯವಸ್ಥೆಯನ್ನು ಸುಧಾರಿಸಲು ರಾಜಕಾರಣಿಗಳಿಂದ ಸಾಧ್ಯವಿಲ್ಲ.ಶ್ರೇಷ್ಠ ವ್ಯಕ್ತಿಗಳಿಂದಲೂ ಸಾಧ್ಯವಿಲ್ಲ. ಆದರೆ ಧರ್ಮಗುರುಗಳಿಂದ ಸಾಧ್ಯವಿದೆ.ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದಾಗ ಅರಿಷಡ್ವರ್ಗಗಳನ್ನು ಗೆದ್ದ ಸ್ವಾಮೀಜಿಗಳಲ್ಲೂ ಎಲ್ಲವೂ ಸರಿಯಿಲ್ಲ ಎಂದು ಅನಿಸುತ್ತಿದೆ’ ಎಂದು ಹೇಳಿದರು.‘ಮನುಷ್ಯ ಮನುಷ್ಯನನ್ನು ಗೌರವಿಸುವ ಸಮಾಜ ನಿರ್ಮಾಣ ಆಗುವವರೆಗೂ ಯಾವುದೇ ಪದವಿ, ಪಿಎಚ್.ಡಿಗಳಿಗೆ ಬೆಲೆ ಇಲ್ಲ’ ಎಂದು ಅವರು ಹೇಳಿದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಮಠಮಾನ್ಯಗಳು ಜನರ ನಂಬಿಕೆಯ ಕೇಂದ್ರಗಳಾಗಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಠಗಳಿಗೆ ಸಹಾಯ ಮಾಡಿದ್ದಾರೆ.ಅವರ ನಿಲುವನ್ನು ಗೌರವಿಸುತ್ತೇನೆ’ ಎಂದರು.

‘ಗೋವು ಕೂಡ ಜನತೆಯ ನಂಬಿಕೆಯ ವಿಷಯವಾಗಿದೆ.ಆದ್ದರಿಂದ ಗೋವನ್ನು ರಕ್ಷಿಸುವುದು ಸರ್ಕಾರದ ಹಾಗೂ ಸಮುದಾಯದ ಕರ್ತವ್ಯ.ಜನರ ನಂಬಿಕೆಯನ್ನು ಸರ್ಕಾರ ಉಳಿಸೇ ಉಳಿಸುತ್ತದೆ’ ಎಂದ ಅವರು, ‘ಮತಾಂತರದ ಪಿಡುಗು, ಭಯೋತ್ಪಾದಕತೆ, ಅಶಾಂತಿ, ಘರ್ಷಣೆ, ಜನಗಳ ಮಧ್ಯೆ ಕಂದಕ ನಿರ್ಮಾಣ, ಶ್ರದ್ಧಾ ಕೇಂದ್ರಗಳಿಗೆ ಅಗೌರವ ಮತ್ತಿತರ ಸಮಸ್ಯೆಗಳ ಬಗ್ಗೆಯೂ ಈ ವೇದಿಕೆಯಲ್ಲಿ ಚರ್ಚೆ ನಡೆಯಬೇಕು’ ಎಂದು ಸಲಹೆ ನೀಡಿದರು.

ಆರ್ಚ್‌ಬಿಷಪ್ ವಸಂತಕುಮಾರ್ ಮಾತನಾಡಿ, ‘ಮತಾಂತರ ಮಾಡುತ್ತೇವೆ ಎಂಬ ಆಪಾದನೆ ಕ್ರೈಸ್ತರ ಮೇಲಿದೆ.ಅದು ನಿರಾಧಾರ. ಜನಗಣತಿ ನೋಡಿದರೆ ನಮ್ಮ ಸಂಖ್ಯೆ ಎಷ್ಟು ಎಂಬುದು ತಿಳಿಯುತ್ತದೆ.ಧರ್ಮ ಧರ್ಮದ ತಿಕ್ಕಾಟಕ್ಕೆ ರಾಜಕೀಯವೇ ಕಾರಣ. ಆದ್ದರಿಂದ ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಬೇಕು’ ಎಂದರು.ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.