ADVERTISEMENT

ಮನು ಬದಲಿಗೆ ಕರಗ ಹೊತ್ತ ಜ್ಞಾನೇಂದ್ರ

ದಿನವಿಡೀ ನಡೆದ ಕಾರ್ಯಕ್ರಮಗಳಿಂದ ಆಯಾಸಗೊಂಡಿದ್ದ ಅರ್ಚಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ಮನು ಬದಲಿಗೆ ಕರಗ ಹೊತ್ತ ಜ್ಞಾನೇಂದ್ರ
ಮನು ಬದಲಿಗೆ ಕರಗ ಹೊತ್ತ ಜ್ಞಾನೇಂದ್ರ   

ಬೆಂಗಳೂರು: ಚೈತ್ರ ಪೂರ್ಣಿಮೆಯ ದಿನವಾದ ಶನಿವಾರ ಮಧ್ಯರಾತ್ರಿ ನಡೆದ ಬೆಂಗಳೂರು ಕರಗ ಶಕ್ತ್ಯೋತ್ಸವದಲ್ಲಿ ಅರ್ಚಕ ಎನ್‌.ಮನು ಬದಲಿಗೆ ಇನ್ನೊಬ್ಬ ಅರ್ಚಕ ಜ್ಞಾನೇಂದ್ರ ಕರಗ ಹೊತ್ತರು. ಅವರು ಕಳೆದ ವರ್ಷ ಕರಗ ಹೊತ್ತಿದ್ದರು.

ಇಡೀ ದಿನದ ಕಾರ್ಯಕ್ರಮಗಳನ್ನು ಪೂರೈಸಿದ್ದ ಮನು, ಗಂಟೆ– ಪೂಜಾರಿಗಳು, ವೀರಕುಮಾರರು ಹಾಗೂ ಸಮುದಾಯದ ಕೆಲ ಮುಖಂಡರು ಸಂಪಂಗಿ ಕೆರೆಯಂಗಳದಿಂದ ರಾತ್ರಿ 11ರ ಸುಮಾರಿಗೆ ಕೆ.ಆರ್.ಮಾರುಕಟ್ಟೆ ಸಮೀಪದ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬಂದರು. ರಥವು ರಾತ್ರಿ 2.15ಕ್ಕೆ ದೇವಸ್ಥಾನದಿಂದ ಹೊರಟಿತು. ಆದರೆ, ಕರಗ ಗರ್ಭಗುಡಿಯಿಂದ ಹೊರಡುವಾಗ ಬೆಳಿಗ್ಗೆ 3.25 ಆಗಿತ್ತು.

‘ಅರ್ಚಕ ಮನು ಮೊದಲ ಬಾರಿಗೆ ಕರಗ ಹೊರುವ ಜವಾಬ್ದಾರಿ ವಹಿಸಿದ್ದರು. ಅವರು ದೈಹಿಕವಾಗಿ ಬಲಿಷ್ಠವಾಗಿದ್ದಾರೆ. ಆದರೆ, ಬೆಳಗಿನ ಕಾರ್ಯಕ್ರಮಗಳಿಂದಾಗಿ ಆಯಾಸಗೊಂಡಿದ್ದ ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೆ, ಸಾವಿರಾರು ಜನರ ನಡುವೆ ಕರಗ ಹೊರಲು ಗಾಬರಿಗೊಂಡಿದ್ದರು. ಹೀಗಾಗಿ, ಅವರ ಬದಲಿಗೆ ಪರ್ಯಾಯ ಅರ್ಚಕರಾದ ಜ್ಞಾನೇಂದ್ರ ಅವರಿಗೆ ಕರಗ ಹೊರುವ ಜವಾಬ್ದಾರಿ ನೀಡಲಾಯಿತು. ಇದರಲ್ಲಿ ಯಾವುದೇ ತಪ್ಪಿಲ್ಲ. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದಲೇ ಪ್ರಧಾನ ಅರ್ಚಕ ಹಾಗೂ ಪರ್ಯಾಯ ಅರ್ಚಕರನ್ನು ನೇಮಿಸಿಕೊಳ್ಳಲಾಗುತ್ತದೆ’ ಎಂದು ವಿಧಾನ ಪರಿಷತ್‌ ಸದಸ್ಯರೂ ಆಗಿರುವ ತಿಗಳ ಸಮುದಾಯದ ಮುಖಂಡ ಪಿ.ಆರ್‌.ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಚಲಕರಿ ನಾರಾಯಣಸ್ವಾಮಿ, ‘ತಾಯಿ (ದ್ರೌಪದಿ) ಒಲಿಯದೇ ಇದ್ದರೆ ಅಥವಾ ಪ್ರಧಾನ ಅರ್ಚಕರಿಗೆ ಆಯಾಸ ಉಂಟಾದರೆ ಕರಗ ಹೊರಲು ಮತ್ತೊಬ್ಬ ಅರ್ಚಕರ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ತಾಯಿಯನ್ನು ತಲೆ ಮೇಲೆ ಇಟ್ಟುಕೊಂಡ ಬಳಿಕ ಪುನಃ ದೇವಸ್ಥಾನಕ್ಕೆ ಬರುವವರೆಗೂ ಎಲ್ಲೂ ಕೆಳಗೆ ಇಳಿಸುವಂತಿಲ್ಲ. ಒಂದು ವೇಳೆ ಇಳಿಸಿದರೆ, ಅವರನ್ನು ಈ ಜವಾಬ್ದಾರಿಯಿಂದ ಮುಕ್ತಗೊಳಿಸಬೇಕಾಲಾಗುತ್ತದೆ. ಆದರೆ, ಈ ಬಾರಿ ಅಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ದೇವಿ ಬೆಳಿಗ್ಗೆ 9.15ಕ್ಕೆ ದೇವಸ್ಥಾನ ಸೇರಿದಳು’ ಎಂದು ಹೇಳಿದರು.

‘ಎಷ್ಟೋ ಕಡೆಗಳಲ್ಲಿ ಕರಗ ಹೊತ್ತು ಮುಂದೆ ಸಾಗಲು ಆಗದೆ ರಸ್ತೆ ಮಧ್ಯೆಯೇ ಬಿಟ್ಟು ವಾಪಸ್‌ ಬಂದ ಘಟನೆಗಳು ನಡೆದಿವೆ. ಆದರೆ, ಈ ಮಹೋತ್ಸವ ಸಸೂತ್ರವಾಗಿ ಜರುಗಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.