ADVERTISEMENT

`ಮನೆಗೆಲಸದವರಿಗೂ ಸ್ವಾಸ್ಥ್ಯ ಬಿಮಾ ಯೋಜನೆ'

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:42 IST
Last Updated 17 ಜೂನ್ 2013, 19:42 IST
ನಗರದ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಕರ್ನಾಟಕ ಗೃಹ ಕಾರ್ಮಿಕರ ಸಂಘಟನೆಯು ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿದ್ದ ಮಾಜಿ ಸಚಿವೆ ರಾಣಿ ಸತೀಶ್ ಅವರು ಮನೆಗೆಲಸದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ನ್ಯಾಷನಲ್ ಅಲೆಯನ್ಸ್ ಆಫ್ ವಿಮೆನ್ ಸಂಘಟನೆಯ ಡಾ.ರುತ್ ಮನೋರಮಾ ಚಿತ್ರದಲ್ಲಿದ್ದಾರೆ. 	-ಪ್ರಜಾವಾಣಿ ಚಿತ್ರ
ನಗರದ ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ಕರ್ನಾಟಕ ಗೃಹ ಕಾರ್ಮಿಕರ ಸಂಘಟನೆಯು ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿದ್ದ ಮಾಜಿ ಸಚಿವೆ ರಾಣಿ ಸತೀಶ್ ಅವರು ಮನೆಗೆಲಸದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ನ್ಯಾಷನಲ್ ಅಲೆಯನ್ಸ್ ಆಫ್ ವಿಮೆನ್ ಸಂಘಟನೆಯ ಡಾ.ರುತ್ ಮನೋರಮಾ ಚಿತ್ರದಲ್ಲಿದ್ದಾರೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೇಂದ್ರ ಸರ್ಕಾರದ `ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ' ಯೋಜನೆ ಅಡಿಯಲ್ಲಿ ಮನೆಗೆಲಸ ನಿರ್ವಹಿಸುವ ಕಾರ್ಮಿಕರಿಗೂ ಚಿಕಿತ್ಸೆ ಪಡೆಯಲು ಅವಕಾಶವಿದೆ ಎಂದು ಕಾರ್ಮಿಕ ಆಯುಕ್ತ ಮಂಜುನಾಥ್ ಹೇಳಿದರು.

ಕರ್ನಾಟಕ ಗೃಹ ಕಾರ್ಮಿಕರ ಸಂಘ, ನ್ಯಾಷನಲ್ ಅಲೆಯನ್ಸ್ ಆಫ್ ವಿಮೆನ್, ನ್ಯಾಷನಲ್ ಸೆಂಟರ್ ಫಾರ್ ಲೇಬರ್ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹ ಕಾರ್ಮಿಕರ ಸಂಘಟನೆಗಳ ಒಕ್ಕೂಟದ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಕಾನೂನುಗಳು ಇದ್ದರೂ, ಮನೆಗೆಲಸದ ಕಾರ್ಮಿಕರಿಗೆ ಇವು ಅನ್ವಯ ಆಗುವುದಿಲ್ಲ. ಮನೆಗೆಲಸ ಕಾರ್ಮಿಕರ ಭದ್ರತೆಯ ಹಿತದೃಷ್ಟಿಯಿಂದ ಸದ್ಯ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿಯೇ ಇರುವ ಸಾಧ್ಯತೆಗಳನ್ನು ಗುರುತಿಸಿ, ಅರ್ಹ ಕಾರ್ಮಿಕರಿಗೆ `ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ' ಯೋಜನೆ ಅಡಿ ಚಿಕಿತ್ಸೆ ಒದಗಿಸಲು ಪಟ್ಟಿ ಮಾಡಲಾಗುತ್ತಿದೆ. ಇದರಿಂದ ಪ್ರತಿ ಕುಟುಂಬದ ಐವರು ಸದಸ್ಯರು ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕೆಲಸದ ಅಭದ್ರತೆ ಮನೆಗೆಲಸದವರ ಪ್ರಮುಖ ಸಮಸ್ಯೆ. ಹಾಗಾಗಿ ಕಾರ್ಮಿಕರು ಕೆಲಸ ಮಾಡುವ ಸ್ಥಳ, ಮಾಲೀಕರ ಹೆಸರು ಮತ್ತು ವಿಳಾಸ, ಸಂಬಳ, ಎಷ್ಟು ಅವಧಿಯ ಕೆಲಸ ಇತ್ಯಾದಿ ವಿಚಾರಗಳ ಕುರಿತು ಒಡಂಬಡಿಕೆ ಮಾಡಿಕೊಳ್ಳಬೇಕು. ಇದರಿಂದ ಮನೆಯ ಮಾಲಿಕ ಇಚ್ಚಿಸಿದಾಗ ಕೆಲಸದಿಂದ ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ಶ್ರಮಕ್ಕೆ ತಕ್ಕ ವೇತನ, ಮುಪ್ಪಿನ ಸಂದರ್ಭದಲ್ಲಿ ಆರ್ಥಿಕ ಭದ್ರತೆ ಕಾರ್ಮಿಕರ ಹಕ್ಕು ಎಂದರು.

ಅಲ್ಲಲ್ಲಿ ಬಿಡಿಬಿಡಿಯಾಗಿ ಕೆಲಸ ನಿರ್ವಹಿಸುವ ಮನೆಗೆಲಸ ಕಾರ್ಮಿಕರನ್ನು ಸಂಘಟಿಸುವುದು ಬಹಳ ಕ್ಲಿಷ್ಟಕರ. ಈ ನಿಟ್ಟಿನಲ್ಲಿ ಅನೇಕ ರಾಷ್ಟ್ರೀಯ ಸಂಘಟನೆಗಳು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಆದರೆ ಕರ್ನಾಟಕ ಗೃಹ ಕಾರ್ಮಿಕರ ಸಂಘಟನೆ ಪ್ರಯತ್ನ ಶ್ಲಾಘನೀಯ. ಸಂಘಟನೆ ಇದೀಗ ಅಖಿಲ ಭಾರತ ಮಟ್ಟದಲ್ಲಿ ಒಕ್ಕೂಟವಾಗಿ ಹೊರಹೊಮ್ಮುವ ಮೂಲಕ ಮತ್ತಷ್ಟೂ ಶಕ್ತಿ ಗಳಿಸಿದೆ. ಕಾರ್ಮಿಕರ ಹಿತರಕ್ಷಣೆಗೆ ಇಲಾಖೆ ಬದ್ಧವಾಗಿರಲಿದೆ ಎಂದು ಹೇಳಿದರು.

ಅಖಿಲ ಭಾರತ ಗೃಹ ಕಾರ್ಮಿಕರ ಒಕ್ಕೂಟವನ್ನು ಉದ್ಘಾಟಿಸಿದ ಮಾಜಿ ಸಚಿವೆ ರಾಣಿ ಸತೀಶ್, `ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ತಮ್ಮ ಅಸ್ತಿತ್ವದ ಉಳಿವಿಗಾಗಿ ನಿರಂತರವಾಗಿ ಸಂಘರ್ಷ ನಡೆಸಬೇಕಿದೆ. ಮನೆಗೆಲಸ ಕಾರ್ಮಿಕರು ತಾವು ನಿರ್ವಹಿಸುತ್ತಿರುವ ಕೆಲಸದ ಬಗ್ಗೆ ಕೀಳರಿಮೆ ತೊರೆದು, ಪ್ರತಿಯೊಬ್ಬರೂ ಗುರುತಿನ ಚೀಟಿ ಪಡೆದುಕೊಳ್ಳಬೇಕು' ಎಂದು ಸಲಹೆ ನೀಡಿದರು.

ನ್ಯಾಷನಲ್ ಅಲೆಯನ್ಸ್ ಆಫ್ ವಿಮೆನ್ ಸಂಘಟನೆಯ ಡಾ.ರುತ್ ಮನೋರಮಾ, ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿಯೂ ಕೆಲಸ ನಿರ್ವಹಿಸುತ್ತಿರುವ ಮನೆಗೆಲಸ ಕಾರ್ಮಿಕರನ್ನು ಒಂದೇ ವೇದಿಕೆ ಅಡಿ ತರುವ ಉದ್ದೇಶದಿಂದ ಅಖಿಲ ಭಾರತ ಗೃಹ ಕಾರ್ಮಿಕರ ಸಂಘಟನೆಗಳ ಒಕ್ಕೂಟವನ್ನು ಸಂಘಟಿಸಲಾಗಿದೆ. ಇದರಲ್ಲಿ 15ಕ್ಕೂ ಹೆಚ್ಚು ರಾಜ್ಯಗಳ ಪ್ರತಿನಿಧಿಗಳು ಕಾರ್ಯನಿರ್ವಹಿಸಲಿದ್ದಾರೆ. ಕಾರ್ಮಿಕರ ವಿವಿಧ ಬೇಡಿಕೆಗಳ ಒಕ್ಕೊರಲ ಆಗ್ರಹಕ್ಕೆ ಒಕ್ಕೂಟದಿಂದ ಶಕ್ತಿ ಸಿಗಲಿದೆ ಎಂದು ತಿಳಿಸಿದರು. 

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಮಂಜುಳಾ, ವಿವಿಧ ರಾಜ್ಯಗಳ ಪ್ರತಿನಿಧಿಗಳಾದ ಶಾಂತಿ, ಮೀನ್ಸೂರ್, ಪದ್ಮಿನಿ, ವಂದನಾ, ಮಂಜು, ಚಿತ್ರಲೇಖ, ರಾಜಕುಮಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.