ADVERTISEMENT

ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಬೆಂಗಳೂರು: ಹಾಲು ಉತ್ಪನ್ನಗಳ ಮಾರಾಟ ಮಳಿಗೆಯ ನೌಕರನೊಬ್ಬ ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಜೀವನ್‌ಬಿಮಾನಗರ ಸಮೀಪದ ಗೀತಾಂಜಲಿ ಲೇಔಟ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಅತ್ಯಾಚಾರ ಎಸಗಿದ ಆರೋಪಿ ಆನಂದ್ (21) ಎಂಬಾತನನ್ನು ಬಂಧಿಸಲಾಗಿದೆ. ಹಾಸನ ಜಿಲ್ಲೆ ಹೊಳೆನರಸೀಪುರದ ಆತ ಗೀತಾಂಜಲಿ ಲೇಔಟ್‌ನಲ್ಲಿರುವ ಹಾಲು ಉತ್ಪನ್ನಗಳ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ.

ಅದೇ ಬಡಾವಣೆಯಲ್ಲಿ ವಾಸವಾಗಿರುವ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯು, ಮಾಲೀಕರ ಮನೆಗೆ ಹಾಲು ಖರೀದಿಸಲು ಆಗಾಗ್ಗೆ ಆನಂದ್ ಕೆಲಸ ಮಾಡುತ್ತಿದ್ದ ಅಂಗಡಿಗೆ ಬರುತ್ತಿದ್ದರು. ಇದರಿಂದಾಗಿ ಆರೋಪಿ ಮತ್ತು ಆ ಮಹಿಳೆ ಪರಸ್ಪರ ಪರಿಚಿತರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆನಂದ್ ಆ ಮಹಿಳೆ ಕೆಲಸ ಮಾಡುತ್ತಿದ್ದ ಮನೆಯ ಬಳಿ ಹೋಗಿ ಬಾಗಿಲು ಬಡಿದಿದ್ದಾನೆ. ಆತ ಪರಿಚಿತ ವ್ಯಕ್ತಿಯಾಗಿದ್ದ ಹಿನ್ನೆಲೆಯಲ್ಲಿ ಮಹಿಳೆ ಬಾಗಿಲು ತೆರೆದಿದ್ದಾರೆ. ಒಳ ಹೋದ ಆತ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೀವನ್‌ಬಿಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಸಾವು
ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಪೀಣ್ಯ ಬಳಿಯ ಎಂಇಎಸ್ ವರ್ತುಲ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.

ಲಗ್ಗೆರೆ ನಿವಾಸಿ ಎಚ್.ಕುಮಾರ್ (40) ಸಾವನ್ನಪ್ಪಿದವರು. ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಅವರು ಕಾರ್ಖಾನೆಯಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

ಕುಮಾರ್ ಅವರು ರಾತ್ರಿ ಎಂಟು ಗಂಟೆ ಸುಮಾರಿಗೆ ವರ್ತುಲ ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ಸವಾರ ಅವರಿಗೆ ಹಿಂದಿನಿಂದ ವಾಹನ ಗುದ್ದಿಸಿದ್ದಾನೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಬೈಕ್ ಸವಾರ ಸಹ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಗುಣಮುಖನಾದ ನಂತರ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಶವಂತಪುರ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಿಎಸ್‌ಎನ್‌ಎಲ್ ಉದ್ಯೋಗಿ ಆತ್ಮಹತ್ಯೆ
ಬಿಎಸ್‌ಎನ್‌ಎಲ್ ಉದ್ಯೋಗಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನಶಂಕರಿ ಮೂರನೇ ಹಂತದ ವಿದ್ಯಾಪೀಠ ವೃತ್ತದ ಬಳಿ ಗುರುವಾರ ರಾತ್ರಿ ನಡೆದಿದೆ.
ಬಿಎಸ್‌ಎನ್‌ಎಲ್‌ನ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಶಾಖೆಯ ಕಚೇರಿಯಲ್ಲಿ ಆಪರೇಟರ್ ಆಗಿದ್ದ ರಾಮಚಂದ್ರಪ್ಪ (56) ಆತ್ಮಹತ್ಯೆ ಮಾಡಿಕೊಂಡವರು.

ಅವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಕ್ಕಳಿಂದ ದೂರವಾಗಿ ಹಲವು ವರ್ಷಗಳಿಂದ ವಿದ್ಯಾಪೀಠ ವೃತ್ತದ ಬಳಿಯ ಓಂ ಶಕ್ತಿ ದೇವಸ್ಥಾನದ ಕೊಠಡಿಯೊಂದರಲ್ಲಿ ವಾಸವಾಗಿದ್ದರು. ಆ ಕೊಠಡಿಯಲ್ಲೇ ಅವರು ರಾತ್ರಿ ನೇಣು ಹಾಕಿಕೊಂಡಿದ್ದಾರೆ.
ಅರ್ಚಕರು ಶುಕ್ರವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ರಾಮಚಂದ್ರಪ್ಪ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ತ್ಯಾಗರಾಜನಗರದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.