ADVERTISEMENT

ಮನೆಗೆ ನುಗ್ಗಿ ವಿದ್ಯಾರ್ಥಿನಿಯ ಕೊಲೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 18:30 IST
Last Updated 11 ಏಪ್ರಿಲ್ 2012, 18:30 IST

ಬೆಂಗಳೂರು: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಹದೇವಪುರ ಸಮೀಪದ ಪೈಲೇಔಟ್‌ನಲ್ಲಿ ಬುಧವಾರ ನಡೆದಿದೆ.

ಉತ್ತರಪ್ರದೇಶ ಮೂಲದ ಮೋನಿಕಾ ರವಿ ಅನ್ಶುಕುಮಾರ್ ಶ್ರೀವಾತ್ಸವ್ (19) ಕೊಲೆಯಾದ ವಿದ್ಯಾರ್ಥಿನಿ. ಕಲ್ಯಾಣನಗರದಲ್ಲಿರುವ ಬೆಂಗಳೂರು ಸಿಟಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಅವರು, ಸಹೋದರಿ ಅಂಜಲಿ ರವಿ ಅನ್ಶುಕುಮಾರ್ ಶ್ರೀವಾತ್ಸವ್ ಅವರ ಜತೆ ಪೈಲೇಔಟ್‌ನ 16ನೇ `ಇ~ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೋನಿಕಾ ಅವರು ಪರೀಕ್ಷೆ ಬರೆಯಲು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದರು. ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಅಂಜಲಿ, ವೈಟ್‌ಫೀಲ್ಡ್‌ನಲ್ಲಿರುವ ಕಚೇರಿಗೆ ಹೋಗಿದ್ದರು. ಪರೀಕ್ಷೆ ಮುಗಿದ ನಂತರ ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ಬಂದ ಮೋನಿಕಾ, ಸಹೋದರಿಯ ಮೊಬೈಲ್‌ಗೆ ಕರೆ ಮಾಡಿ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೇನೆ ಎಂದು ಹೇಳಿದ್ದರು.

ಆ ನಂತರ ದುಷ್ಕರ್ಮಿಗಳು ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅಂಜಲಿ ಅವರು ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಮನೆಯಲ್ಲಿದ್ದ ಚಿನ್ನಾಭರಣ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ. ಕೊಲೆಯ ಕಾರಣ ಹಾಗೂ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಪೊಲೀಸರು ಹೇಳಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಟಿ.ಜಿ.ಕೃಷ್ಣಭಟ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.