ADVERTISEMENT

ಮನೆಯಲ್ಲಿ ಒಂಟಿ ಮಹಿಳೆ ಹತ್ಯೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:55 IST
Last Updated 13 ಮಾರ್ಚ್ 2018, 19:55 IST

ಬೆಂಗಳೂರು: ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ವಿಜಯಮ್ಮ (50) ಎಂಬುವರು ತಮ್ಮ ಮನೆಯಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾರೆ.

ವಿಜಯಮ್ಮ ಅವರು ಸಾಕು ಮಗಳೊಂದಿಗೆ ವಾಸವಿದ್ದರು. ವಾರದ ಹಿಂದೆ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರಿಂದ, ಮನೆಯಲ್ಲಿ ಇವರೊಬ್ಬರೇ ಇದ್ದರು.

ಮಂಗಳವಾರ ಸಂಜೆ ಪರಿಚಿತರೊಬ್ಬರು ಮನೆ ಹತ್ತಿರ ಹೋದಾಗ, ಹೊರಗಿನಿಂದ ಚಿಲಕ ಹಾಕಿತ್ತು. ಕಿಟಕಿ ಮೂಲಕ ಒಳಗೆ ನೋಡಿದಾಗ ವಿಜಯಮ್ಮ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ADVERTISEMENT

‘ಹಂತಕರು ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಕೊಂದಿದ್ದಾರೆ. ಮನೆಯಿಂದ ಯಾವುದೇ ಬೆಲೆಬಾಳುವ ವಸ್ತುಗಳು ಕಳವಾಗಿಲ್ಲ. ಹೀಗಾಗಿ, ಪರಿಚಿತರೇ ಕೃತ್ಯ ಎಸಗಿರಬಹುದು ಎಂಬ ಅನುಮಾನವಿದೆ. ಶ್ವಾನದಳ, ಬೆರಳಚ್ಚು ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ತಜ್ಞರು ಸ್ಥಳಪರಿಶೀಲನೆ ನಡೆಸಿದ್ದಾರೆ. ಹಂತಕರ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಸೋಮವಾರ ಮಧ್ಯಾಹ್ನ ವಿಜಯಮ್ಮ ಅವರ ಸಾಕು ಮಗಳು ಪತಿ ಜತೆ ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ತಾಯಿ–ಮಗಳ ನಡುವೆ ಮಾತಿನ ಚಕಮಕಿಯಾಗಿತ್ತು’ ಎಂದು ಸ್ಥಳೀಯರು ಹೇಳಿಕೆ ಕೊಟ್ಟಿದ್ದಾರೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.