ADVERTISEMENT

ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ವಸತಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2016, 19:41 IST
Last Updated 12 ಆಗಸ್ಟ್ 2016, 19:41 IST
ದೊಡ್ಡ ಬೊಮ್ಮಸಂದ್ರದಲ್ಲಿ ನೆಲಸಮ ಮಾಡಲಾದ ಕಟ್ಟಡಗಳ ಅವಶೇಷದಿಂದ ಗುಜರಿ ಆಯ್ದುಕೊಂಡು ಹೊರಟ ಮಕ್ಕಳು (ಎಡಚಿತ್ರ),  ಅವಶೇಷದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಟ್ಟಡದ ಮಾಲೀಕರು ಸ್ಥಳಾಂತರಿಸಿದರು      	–ಪ್ರಜಾವಾಣಿ ಚಿತ್ರಗಳು
ದೊಡ್ಡ ಬೊಮ್ಮಸಂದ್ರದಲ್ಲಿ ನೆಲಸಮ ಮಾಡಲಾದ ಕಟ್ಟಡಗಳ ಅವಶೇಷದಿಂದ ಗುಜರಿ ಆಯ್ದುಕೊಂಡು ಹೊರಟ ಮಕ್ಕಳು (ಎಡಚಿತ್ರ), ಅವಶೇಷದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕಟ್ಟಡದ ಮಾಲೀಕರು ಸ್ಥಳಾಂತರಿಸಿದರು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು:  ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ತಾತ್ಕಾಲಿಕ ಪುನರ್ವಸತಿ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ನಿರ್ಧರಿಸಿದೆ.
ಶುಕ್ರವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು, ಮಾನವ ಹಕ್ಕುಗಳ ಆಯೋಗದ ಸೂಚನೆಯನ್ನು ಪಾಲನೆ ಮಾಡಲು ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆ ಬಳಿಕ ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಹಾಗೂ ಆಡಳಿತ ಪಕ್ಷದ ನಾಯಕ ಆರ್‌.ಎಸ್‌. ಸತ್ಯನಾರಾಯಣ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದ ಅವರು, ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧದ ಸಮಗ್ರ ವರದಿ ನೀಡಿದರು.

‘ಮಳೆಯಿಂದ ಬಾಧಿತವಾಗುವ ಪ್ರದೇಶಗಳಲ್ಲಿ ಆದ್ಯತೆ ಮೇಲೆ ಕಾರ್ಯಾಚರಣೆ ನಡೆಸಬೇಕು’ ಎಂದು ಮುಖ್ಯಮಂತ್ರಿ ಆದೇಶಿಸಿದರು. ‘ರಾಜಕಾಲುವೆ ಒತ್ತುವರಿಗೆ ನಗರ ಯೋಜನೆ ವಿಭಾಗದ ಎಂಜಿನಿಯರ್‌ಗಳು ಮಾತ್ರವಲ್ಲದೆ ಕಂದಾಯ ಅಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳು ಸಹ ಕಾರಣವಾಗಿದ್ದು, ಅವರನ್ನೂ ಪತ್ತೆಮಾಡಿ ಬಲಿ ಹಾಕಬೇಕು’ ಎಂದು ಸೂಚಿಸಿದರು.

‘ಮಂಗಳವಾರದಿಂದ ಮತ್ತೆ ಕಾರ್ಯಾಚರಣೆ ಶುರುವಾಗಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆಮಾಡುವ ಕಾರ್ಯವೂ ನಡೆದಿದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.
ಆಯೋಗದ ಆದೇಶ: ‘ರಾಜಕಾಲುವೆ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡ ಎಲ್ಲ ಕುಟುಂಬಗಳಿಗೂ ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು. ತಂಗುದಾಣ, ಆಹಾರ, ನೀರು ಹಾಗೂ ಶೌಚಾಲಯ ಸೌಲಭ್ಯವನ್ನು ಪುನರ್ವಸತಿ ಕೇಂದ್ರ ಹೊಂದಿರಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಆದೇಶ ನೀಡಿದೆ. ‘ಯಾವುದೇ ಮನೆ ತೆರವುಗೊಳಿಸುವ ಮುನ್ನ ಸಾಕಷ್ಟು ಮುಂಚಿತವಾಗಿ ನೋಟಿಸ್‌ ನೀಡಬೇಕು’ ಎಂದೂ ಸೂಚನೆ ನೀಡಿದೆ.

ಸಾಮಾಜಿಕ ಕಾರ್ಯಕರ್ತ, ಹಲಸೂರಿನ ಟಿ.ನರಸಿಂಹಮೂರ್ತಿ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗದ ಹಂಗಾಮಿ ಅಧ್ಯಕ್ಷರು ಈ ಆದೇಶ ನೀಡಿದರು.
‘ಅಧಿಕೃತ ಖಾತಾ ಹೊಂದಿ, ಆಸ್ತಿ ತೆರಿಗೆ ಸೇರಿದಂತೆ ಎಲ್ಲ ವಿಧದ ಶುಲ್ಕಗಳನ್ನು ಕಾಲಕಾಲಕ್ಕೆ ತುಂಬುತ್ತಾ ಬಂದ ಕುಟುಂಬಗಳು ಸಹ ಕೆರೆ ಅಂಗಳ ಹಾಗೂ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತೊಂದರೆಗೆ ಒಳಗಾಗಿವೆ’ ಎಂದು ಆಯೋಗ ವಿಷಾದ ವ್ಯಕ್ತಪಡಿಸಿದೆ.
‘ಜೀವಮಾನದ ಉಳಿತಾಯವನ್ನು ವ್ಯಯಿಸಿ, ಬ್ಯಾಂಕ್‌ನಲ್ಲಿ ಸಾಲ ಮಾಡಿ ಕಟ್ಟಿಕೊಂಡ ಮನೆಗಳು ಉರುಳಿಬಿದ್ದಿವೆ. ಹಾಗೆ ಮನೆ ಕಳೆದುಕೊಂಡವರು ಆಹಾರ, ನೀರಿನ ಲಭ್ಯತೆಯಿಲ್ಲದೆ ಇನ್ನಷ್ಟು ಹಿಂಸೆ ಅನುಭವಿಸಿದ್ದಾರೆ. ಅವರ ಮಕ್ಕಳ ಮೇಲೂ ಈ ಪರಿಸ್ಥಿತಿ ವ್ಯತಿರಿಕ್ತ ಪರಿಣಾಮ ಬೀರಿದೆ. ಆ ಮಕ್ಕಳ ಶಿಕ್ಷಣ ಹಕ್ಕನ್ನೂ ಮೊಟಕುಗೊಳಿಸಿದಂತೆ ಆಗಿದೆ. ಎಲ್ಲರ ಹಿತರಕ್ಷಣೆ ಕಾಯುವುದು ಸರ್ಕಾರದ ಹೊಣೆ’ ಎಂದು ತಿಳಿಸಿದೆ.

‘ಆಡಳಿತದ ಪ್ರತಿ ಹಂತದಲ್ಲೂ ಮಾನವ ಹಕ್ಕುಗಳ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ’ ಎಂದು ನೆನಪಿಸಿದೆ. ‘ಬಡವರ ಮನೆಗಳನ್ನು ಮಾತ್ರ ಬಿಬಿಎಂಪಿ ಗುರಿ ಮಾಡುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಬೇಕು’ ಎಂದು ಸೂಚಿಸಿದೆ.

ಗುಜರಿ ಸಂಗ್ರಹಿಸಿದರು

ದೊಡ್ಡ ಬೊಮ್ಮಸಂದ್ರದಲ್ಲಿ ನೆಲಸಮಗೊಳಿಸಿದ ಕಟ್ಟಡಗಳ ಅವಶೇಷಗಳಲ್ಲಿ ಶುಕ್ರವಾರ ಗುಜರಿ ಆಯುತ್ತಿದ್ದ ದೃಶ್ಯ ಕಂಡುಬಂತು. ಗುಜರಿ ಆಯುವವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇಟ್ಟಿಗೆಗಳ ರಾಶಿಯಲ್ಲಿ ಕಬ್ಬಿಣದ ತುಂಡು, ಸರಳು ಹುಡುಕಿ, ಒಯ್ಯುತ್ತಿದ್ದರು. ಕಾಂಕ್ರೀಟ್‌ನಲ್ಲಿದ್ದ ಸರಳುಗಳನ್ನು ಸುತ್ತಿಗೆಯಿಂದ ಒಡೆದು ತೆಗೆಯಲಾಗುತ್ತಿತ್ತು.
ಮನೆಗಳ ಮಾಲೀಕರು ಬಾಗಿಲು, ಚೌಕಟ್ಟು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿದರು. ಕಬ್ಬಿಣದ ಗ್ರಿಲ್‌ಗಳನ್ನು ಆಟೊಗಳಲ್ಲಿ ಸಾಗಿಸುತ್ತಿದ್ದ ನೋಟವೂ ಕಣ್ಣಿಗೆ ಬಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.