ADVERTISEMENT

ಮನೆ ಬಿಟ್ಟು ಹೋದ ಮಗ; ಎಎಸ್‌ಐ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 19:18 IST
Last Updated 20 ಮೇ 2018, 19:18 IST
ಮನೆ ಬಿಟ್ಟು ಹೋದ ಮಗ; ಎಎಸ್‌ಐ ಆತ್ಮಹತ್ಯೆ
ಮನೆ ಬಿಟ್ಟು ಹೋದ ಮಗ; ಎಎಸ್‌ಐ ಆತ್ಮಹತ್ಯೆ   

ಬೆಂಗಳೂರು: ಮಗ ಮನೆ ಬಿಟ್ಟು ಹೋದ ನೋವಿನಲ್ಲಿ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ದಕ್ಷಿಣ ವಿಭಾಗದ ಎಎಸ್‌ಐ ದಯಾನಂದ ಸಾಗರ್ (58) ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜಯನಗರದಲ್ಲಿ ನೆಲೆಸಿದ್ದ ದಯಾನಂದ, ಶನಿವಾರ ಜೆಡಿಎಸ್ ಮುಖಂಡ ಎಚ್‌.ಡಿ.ದೇವೇಗೌಡ ಅವರ ಮನೆ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದರು. ಕರ್ತವ್ಯ ಮುಗಿಸಿ ರಾತ್ರಿ 9 ಗಂಟೆಗೆ ಆಡುಗೋಡಿಯ ಸಿಎಆರ್ ಕೇಂದ್ರಕ್ಕೆ ಮರಳಿದ ಅವರು, ಸಮವಸ್ತ್ರ ಬದಲಿಸುವ ಗೋದಾಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾತ್ರಿ 11 ಗಂಟೆಯಾದರೂ ತಂದೆ ಮನೆಗೆ ಬಾರದಿದ್ದಾಗ, ಕಿರಿಯ ಮಗ ಕಿರಣ್ ಸಾಗರ್ ಹಲವು ಬಾರಿ ಕರೆ ಮಾಡಿದ್ದರು. ಫೋನ್ ರಿಂಗ್ ಆಗುತ್ತಿದ್ದರೂ, ಪ್ರತಿಕ್ರಿಯೆ ದೊರೆಯದಿದ್ದಾಗ ಅವರನ್ನು ಹುಡುಕಿಕೊಂಡು ಸಿಎಆರ್‌ ಕೇಂದ್ರಕ್ಕೆ ಬಂದಿದ್ದರು. ಆಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

‘ಅಣ್ಣ ಗಣೇಶ್ ಸಾಗರ್ ಇದೇ ಫೆಬ್ರುವರಿಯಲ್ಲಿ ಮನೆ ಬಿಟ್ಟು ಹೋದ. ಆ ನಂತರ ತಂದೆ ಖಿನ್ನತೆಗೆ ಒಳಗಾಗಿದ್ದರು. ರಾತ್ರಿ ಸಿಎಆರ್ ಕೇಂದ್ರಕ್ಕೆ ಬಂದಾಗ, ಗೋದಾಮಿನ ಬಳಿ ಅವರ ಬೈಕ್ ಕಾಣಿಸಿತು. ಒಳಗೆ ಹೋಗಿ ನೋಡಿದಾಗ, ಅವರು ನೇಣಿಗೆ ಶರಣಾಗಿದ್ದರು. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದೆ’ ಎಂದು ಕಿರಣ್ ಹೇಳಿದ್ದಾರೆ.

ಮೃತರ ಜೇಬಿನಲ್ಲಿ ಪತ್ರ ಸಿಕ್ಕಿದ್ದು, ‘ನನ್ನ ಸಾವಿಗೆ ಯಾರೂ ಕಾರಣರಲ್ಲ. ಮಗನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ. ಎಲ್ಲ ಕಡೆ ಹುಡುಕಿದರೂ, ಆತನ ಬಗ್ಗೆ ಸುಳಿವು ಸಿಗಲಿಲ್ಲ. ಆ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ’ ಎಂದು ಅದರಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.