ಬೆಂಗಳೂರು: ಮನೋರಾಯನಪಾಳ್ಯ ದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಹೆಬ್ಬಾಳ ಪೊಲೀಸರು ರಮೇಶ (24) ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯು ಜೂ 20 ರಂದು ತನ್ನ ಮಾವ ಗಣೇಶಪ್ಪ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಮೂಲತಃ ರಾಣೆಬೆನ್ನೂರಿನ ರಮೇಶ, ಚಂದ್ರಪ್ಪ ಎಂಬುವರಿಂದ ಒಂದೂವರೆ ಲಕ್ಷ ರೂ ಹಣ ಸಾಲ ಪಡೆದಿದ್ದ. ಸಾಲ ಹಿಂದಿರುಗಿಸದೆ ಪತ್ನಿ ಹಾಗೂ ಮಾವ ಗಣೇಶಪ್ಪನನ್ನು ಕರೆದುಕೊಂಡು ನಗರಕ್ಕೆ ಬಂದು ಕಟ್ಟಡ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಗಣೇಶಪ್ಪ ರಾಣೆಬೆನ್ನೂರಿಗೆ ಹೋಗಿದ್ದರು. ಅವರ ಬಳಿ ರಮೇಶನ ವಿಳಾಸ ಪಡೆದ ಚಂದ್ರಪ್ಪ, ಬೆಂಗಳೂರಿಗೆ ಬಂದು ಸಾಲದ ಹಣ್ನ ಹಿಂದಿರುಗಿಸುವಂತೆ ರಮೇಶ್ ಜತೆ ಜಗಳವಾಡಿದ್ದರು. ಆಗ ಆರೋಪಿಯು ಒಂದು ವಾರದೊಳಗೆ ಸಾಲ ತೀರಿಸುವುದಾಗಿ ಚಂದ್ರಪ್ಪನಿಗೆ ಹೇಳಿ ಕಳುಹಿಸಿದ್ದ.
`ತನ್ನ ಮಾವನಿಂದ ಸಾಲಗಾರನಿಗೆ ನನ್ನ ವಿಳಾಸ ಗೊತ್ತಾಯಿತು ಎಂದು ಆಕ್ರೋಶಗೊಂಡ ರಮೇಶ, ತಾನು ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿ ಮದ್ಯ ಕುಡಿಯುತ್ತ ಕುಳಿತಿದ್ದ ಮಾವನ ಜತೆ ಜಗಳ ತೆಗೆದ. ಮಾತಿಗೆ ಮಾತು ಬೆಳೆದು ಗಣೇಶಪ್ಪ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ನಂತರ ಕಟ್ಟಡದಲ್ಲಿದ್ದ ಸಂಪ್‌ನ ಮೋಟಾರ್ ಯಂತ್ರವನ್ನು ಬೇರೆಡೆ ಬಚ್ಚಿಟ್ಟು, ಕಳ್ಳರು ನನ್ನ ಮಾವನನ್ನು ಕೊಲೆ ಮಾಡಿ ಮೋಟಾರ್ ಕಳವು ಮಾಡಿದ್ದಾರೆ ಎಂದು ಚಂದ್ರಪ್ಪ ಅವರಿಗೆ ಕರೆ ಮಾಡಿ ಹೇಳಿದ್ದ~ ಎಂದು ಪೊಲೀಸರು ಹೇಳಿದ್ದಾರೆ.
`ಗಣೇಶಪ್ಪ ಕುಟುಂಬ ಸದಸ್ಯರು ಹಾಗೂ ಸಹಕಾರ್ಮಿಕರ ವಿಚಾರಣೆ ನಡೆಸಲಾಯಿತು. ರಮೇಶನ ಪ್ಯಾಂಟ್ ಹಾಗೂ ಚಪ್ಪಲಿಯ ಮೇಲಿದ್ದ ರಕ್ತದ ಕಲೆಗಳಿಂದ ಆತನೇ ಕೊಲೆಗಾರ ನೆಂಬುದು ಖಚಿತವಾಯಿತು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ~ ಎಂದು ಅಧಿಕಾರಿಗಳು ತಿಳಿಸಿದರು.
ಉತ್ತರ ವಿಭಾಗದ ಡಿಸಿಪಿ ಎಚ್. ಎಸ್.ರೇವಣ್ಣ, ಎಸಿಪಿ ಎಚ್. ಎಂ. ಓಂಕಾರಯ್ಯ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.