ADVERTISEMENT

ಮರ್ಯಾದಾ ಹತ್ಯೆ: ರಕ್ಷಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬೆಂಗಳೂರು: `ಮರ್ಯಾದಾ ಹತ್ಯೆ ಪ್ರಕರಣದ ಆರೋಪಿಗಳಿಂದ ನಮಗೆ ಪ್ರಾಣ ಬೆದರಿಕೆ ಇದ್ದು, ಸೂಕ್ತ ಪೊಲೀಸ್ ರಕ್ಷಣೆ ಕೊಡಿಸಬೇಕು~ ಎಂದು ಯುವಕ ಗೋವಿಂದರಾಜು ಅವರ ಕುಟುಂಬ ಸದಸ್ಯರು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ನಗರದಲ್ಲಿರುವ ಆಯೋಗದ ಕಚೇರಿಯಲ್ಲಿ ನಾಯಕ್ ಅವರನ್ನು ಭೇಟಿ ಮಾಡಿದ ಗೋವಿಂದರಾಜು ತಂದೆ ವೆಂಕಟಾಚಲ, ತಾಯಿ ತೊಳಸಮ್ಮ, ಅಣ್ಣ ತಿಮ್ಮಪ್ಪ ಹಾಗೂ ಅತ್ತಿಗೆ ತಾಯಮ್ಮ ಅವರು, `ಕೊಲೆಯಾದ ಸುವರ್ಣಾ ಅವರ ತಂದೆ ದವಲನ ರಾಮಕೃಷ್ಣ ಮತ್ತು ಇತರೆ ಆರೋಪಿಗಳು ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದಂತೆ ಈ ಹಿಂದೆ ಬೆದರಿಕೆ ಹಾಕಿದ್ದರು. ಇದರಿಂದಾಗಿ ಪ್ರತಿನಿತ್ಯ ಜೀವ ಭಯದಲ್ಲೇ ಬದುಕು ಸಾಗಿಸುವಂತಾಗಿದೆ~ ಎಂದು ಅಳಲು ತೋಡಿಕೊಂಡರು.

`ರಾಮಕೃಷ್ಣ ಮತ್ತು ಇತರೆ ಆರೋಪಿಗಳು ಕೊಲೆ ಮಾಡಬಹುದೆಂಬ ಭಯದಿಂದ ಊರು ತೊರೆದಿದ್ದೇವೆ. ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ ಊರೂರು ಅಲೆಯುತ್ತಿದ್ದೇವೆ. ಆರೋಪಿಗಳು ಸಹೋದರನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಸ್ಥಳೀಯ ಪೊಲೀಸರಿಗೆ ರಾಮಕೃಷ್ಣ ಅವರ ಬಗ್ಗೆ ಸುಳಿವು ಇದ್ದರೂ ಈವರೆಗೂ ಅವರನ್ನು ಬಂಧಿಸಿಲ್ಲ. ರಾಮಕೃಷ್ಣ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಪೊಲೀಸರು ಅವರ ಪರವಾಗಿಯೇ ವರ್ತಿಸುತ್ತಿದ್ದಾರೆ~ ಎಂದು ತಿಮ್ಮಪ್ಪ ದೂರಿದರು.

ಆಬಲವಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರಕರಣದ ಬಗ್ಗೆ ನ್ಯಾಯಯುತ ರೀತಿಯಲ್ಲಿ ತನಿಖೆ ನಡೆಸಲು ಮತ್ತು ಪ್ರಮುಖ ಆರೋಪಿ ರಾಮಕೃಷ್ಣ ಅವರನ್ನು ಕೂಡಲೇ ಬಂಧಿಸುವಂತೆ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಕುಟುಂಬ ಸದಸ್ಯರಿಗೆ ಸೂಕ್ತ ಪೊಲೀಸ್ ರಕ್ಷಣೆ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಸದ್ಯದಲ್ಲೇ ಮನವಿ ಸಲ್ಲಿಸಲಾಗುತ್ತದೆ ಎಂದು ಅವರು ಹೇಳಿದರು.

ಸೂಕ್ತ ತನಿಖೆಗೆ ಸೂಚನೆ:  `ಪ್ರಕರಣದ ಸಂಬಂಧ ಯಾವುದೇ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆ ನಡೆಸುವಂತೆ ಮತ್ತು ಎಲ್ಲ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡುತ್ತೇನೆ. ಪ್ರಕರಣದ ಸಂಬಂಧ ಈಗಾಗಲೇ ಆಯೋಗದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಂದ ವರದಿ ತರಿಸಿಕೊಂಡು ತನಿಖೆ ನಡೆಸಲಾಗುತ್ತದೆ~ ಎಂದು ಎಸ್.ಆರ್.ನಾಯಕ್ ಅವರು ಗೋವಿಂದರಾಜು ಕುಟುಂಬ ಸದಸ್ಯರಿಗೆ ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.