ADVERTISEMENT

ಮಲ್ಲಿಗೆ, ಸಂಪಿಗೆ, ಪಾರಿಜಾತ ಲೋಕಾರ್ಪಣೆ

ಹೈಕೋರ್ಟ್‌ನ ಬಿ, ಸಿ ಹಾಗೂ ಡಿ ವೃಂದದ 675 ಸಿಬ್ಬಂದಿಗೆ ‘ವಸತಿ ಭಾಗ್ಯ’: ಎನ್‌ಜಿಇಎಫ್ ಲೇಔಟ್‌ನಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:32 IST
Last Updated 8 ಜುಲೈ 2017, 19:32 IST
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರು ಪಾರಿಜಾತ ಬ್ಲಾಕ್‌ನ ವಸತಿ ಸಮುಚ್ಚಯವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿ.ಬಿ.ಜಯಚಂದ್ರ ಹಾಗೂ ಎಚ್.ಸಿ.ಮಹದೇವಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರು ಪಾರಿಜಾತ ಬ್ಲಾಕ್‌ನ ವಸತಿ ಸಮುಚ್ಚಯವನ್ನು ಉದ್ಘಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿ.ಬಿ.ಜಯಚಂದ್ರ ಹಾಗೂ ಎಚ್.ಸಿ.ಮಹದೇವಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೈಕೋರ್ಟ್‌ನ ಬಿ, ಸಿ ಹಾಗೂ ಡಿ ವೃಂದದ ಸಿಬ್ಬಂದಿಗಾಗಿ ಎನ್‌ಜಿಇಎಫ್ ಲೇಔಟ್‌ನಲ್ಲಿ  ನಿರ್ಮಿಸಲಾಗಿರುವ ವಸತಿ ಸಮುಚ್ಚಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉದ್ಘಾಟಿಸಿದರು.

ಐದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಸಮುಚ್ಚಯದಲ್ಲಿ ಮೂರು ಬ್ಲಾಕ್‌ಗಳಿದ್ದು, ಇವುಗಳಿಗೆ ಮಲ್ಲಿಗೆ (ಬಿ ಬ್ಲಾಕ್), ಸಂಪಿಗೆ (ಸಿ ಬ್ಲಾಕ್), ಹಾಗೂ ಪಾರಿಜಾತ (ಡಿ ಬ್ಲಾಕ್) ಎಂದು ಹೆಸರಿಡಲಾಗಿದೆ. ಇವು ತಲಾ 9 ಮಹಡಿಗಳನ್ನು ಹೊಂದಿವೆ.

ಬಿ ಮತ್ತು ಸಿ ಬ್ಲಾಕ್‌ನಲ್ಲಿ ತಲಾ 706 ಚದರ ಅಡಿಯ 252 ವಸತಿಗೃಹಗಳಿವೆ. ಇವುಗಳಲ್ಲಿ ಎರಡು ಕೊಠಡಿಗಳು, ಹಾಲ್, ಅಡುಗೆಮನೆ, ಶೌಚಾಲಯಗಳಿವೆ. ಡಿ ಬ್ಲಾಕ್‌ನಲ್ಲಿ ತಲಾ 503 ಚದರ ಅಡಿಯ 171 ವಸತಿಗೃಹಗಳಿದ್ದು, ಇವುಗಳು ತಲಾ ಒಂದು ಕೊಠಡಿ, ಹಾಲ್, ಅಡುಗೆಮನೆ ಹಾಗೂ ಶೌಚಾಲಯಗಳನ್ನು ಒಳಗೊಂಡಿವೆ. ಈ ಮನೆಗಳನ್ನು  ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿರುವ 675 ಸಿಬ್ಬಂದಿಗೆ  ಹಂಚಿಕೆ ಮಾಡಲಾಗುತ್ತದೆ.

ಮೂಲ ಸೌಕರ್ಯ ಅವಶ್ಯಕ: ‘ನ್ಯಾಯಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡಲು ನ್ಯಾಯಮೂರ್ತಿಗಳಿಗೆ ಹಾಗೂ ನ್ಯಾಯಾಲಯಗಳ ಸಿಬ್ಬಂದಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಮುಖ್ಯಮಂತ್ರಿ  ಹೇಳಿದರು.

‘ಸರ್ಕಾರ ನಿರ್ಮಿಸುವ ಕಟ್ಟಡಗಳು ಗುಣಮಟ್ಟದಿಂದ ಕೂಡಿರುವುದಿಲ್ಲ. ಉದ್ಘಾಟನೆಗೂ ಮೊದಲೇ ಅವುಗಳ ಚಾವಣಿ ಸೋರುತ್ತದೆ ಎಂಬ ಆರೋಪವಿದೆ.  ಇಂಥ ಆರೋಪಗಳಿಗೆ ಅಪವಾದ ಎಂಬಂತೆ  ಈ ಸಮುಚ್ಚಯ  ವನ್ನು ಉತ್ಕೃಷ್ಟ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

‘2013ರಿಂದ 2017ರ ವರೆಗೆ ರಾಜ್ಯದಲ್ಲಿ 333 ಮೂರು ನ್ಯಾಯಾಲಯದ ಕಟ್ಟಡಗಳನ್ನು ಹಾಗೂ 192 ವಸತಿಗೃಹಗಳನ್ನು ನಿರ್ಮಿಸಲಾಗಿದೆ.  ಇವುಗಳಿಗೆ  ₹ 1,492.88 ಕೋಟಿ ವೆಚ್ಚ ವಾಗಿದೆ.  ಕೇಂದ್ರ ಸರ್ಕಾರದ ಪಾಲು ₹ 1,016.49 ಕೋಟಿ ಹಾಗೂ ರಾಜ್ಯ ಸರ್ಕಾರದ ಪಾಲು ₹ 476.39 ಕೋಟಿ. ಆದರೆ, ಕೇಂದ್ರ ಸರ್ಕಾರ ₹ 443.64 ಕೋಟಿಯನ್ನು ಮಾತ್ರ ಬಿಡುಗಡೆ ಮಾಡಿದ್ದು, ₹ 572.85 ಕೋಟಿಯನ್ನು ಬಾಕಿ ಉಳಿಸಿಕೊಂಡಿದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. 

ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಮಾತನಾಡಿ, ‘ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆಯ ಬಹುತೇಕ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಿದೆ. ನ್ಯಾಯಮೂರ್ತಿಗಳಂತೆಯೇ ಅವರ ಜತೆಗೆ ಕೆಲಸ ಮಾಡುವ ಸಿಬ್ಬಂದಿಗೂ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧ’ ಎಂದರು.

ಏನೇನು ಸೌಲಭ್ಯಗಳು
* ತಲಾ 18 ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ 10 ಲಿಫ್ಟ್‌ಗಳು
* ಅಗ್ನಿಶಾಮಕ ವ್ಯವಸ್ಥೆ
* ಮಳೆನೀರು ಸಂಗ್ರಹ ಘಟಕ
* ತ್ಯಾಜ್ಯ ನೀರು ಸಂಸ್ಕರಣಾ ಘಟಕ

* ವಾಹನಗಳ ನಿಲುಗಡೆಗೆ ಸ್ಥಳಾವಕಾಶ
* ‘ಮಲ್ಲಿಗೆ’, ‘ಸಂಪಿಗೆ’ ಬ್ಲಾಕ್‌ಗಳ ನಡುವೆ ಸಂಪರ್ಕ ಸೇತುವೆ
* 3 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯದ ಸಂಪ್
* 40 ಸಾವಿರ ಲೀಟರ್ ಸಾಮರ್ಥ್ಯದ 10 ನೀರಿನ ಟ್ಯಾಂಕ್‌ಗಳು
* ನಿರಂತರ ವಿದ್ಯುತ್ ಪೂರೈಕೆಗಾಗಿ 750 ಕೆ.ವಿ. ಸಾಮರ್ಥ್ಯದ ಡೀಸೆಲ್ ಜನರೇಟರ್
*
ಸಭಾಂಗಣ ನಿರ್ಮಿಸಲು ಮನವಿ
‘ಸುಮಾರು 675 ಕುಟುಂಬಗಳು ವಾಸಿಸುವ  ಈ ವಸತಿ ಸಮುಚ್ಚಯದಲ್ಲಿ ಸಭೆ ಸಮಾರಂಭ ನಡೆಸಲು ಸಭಾಂಗಣದ ಕೊರತೆ ಇದೆ. ಇದನ್ನು ನೀಗಿಸಿ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಸಿಬ್ಬಂದಿಯ ಪರವಾಗಿ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದರು.
*
ಅಭಿವೃದ್ಧಿ ಕಾರ್ಯದಿಂದ ಮಾತ್ರ ಸಮಾಜದ ಹಿತ ಕಾಪಾಡಲು ಸಾಧ್ಯ. ಹೀಗಾಗಿ, ರಸ್ತೆ, ಕಟ್ಟಡ, ಹಾಗೂ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇವೆ.
ಸಿದ್ದರಾಮಯ್ಯ,
ಮುಖ್ಯಮಂತ್ರಿ
*
ವಸತಿ ಸಮುಚ್ಚಯದ ಮನೆಗಳನ್ನು ಸಿಬ್ಬಂದಿ ಸ್ವಂತ ಮನೆಗಳಂತೆ ಜತನದಿಂದ ಕಾಪಾಡಬೇಕು
ಮೋಹನ್ ಎಂ. ಶಾಂತನಗೌಡರ್,
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT