ADVERTISEMENT

ಮಲ್ಹೋತ್ರಾ ಆತ್ಮಹತ್ಯೆ: ಸಿಐಡಿ ತನಿಖೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:48 IST
Last Updated 2 ಜುಲೈ 2013, 19:48 IST

ಬೆಂಗಳೂರು: ಪುಣೆ ಮೂಲದ ಉದ್ಯಮಿ ರಿಪ್ಪನ್ ಮಲ್ಹೋತ್ರಾ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ತಿಳಿಸಿದರು.

`ಆತ್ಮಹತ್ಯೆಗೂ ಮುನ್ನ ಮಲ್ಹೋತ್ರ ನನಗೆ ಬರೆದ ಪತ್ರ ಕೈಸೇರಿದೆ. ಅದರಲ್ಲಿ ಪೊಲೀಸ್ ಅಧಿಕಾರಿಗಳ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿದೆ. ಕೆಲವು ಅಧಿಕಾರಿಗಳು ಏಳು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂಬ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಹೀಗಾಗಿ ವಾಸ್ತವ ತಿಳಿಯಲು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ' ಎಂದು ಅವರು ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಸಭೆಯಲ್ಲಿ ತಿಳಿಸಿದರು.

ಇಂತಹ ಘಟನೆಗಳು ಮರುಕಳಿಸಬಾರದು ಎನ್ನುವ ಕಾರಣಕ್ಕೆ ಕಠಿಣ ತೀರ್ಮಾನಕ್ಕೆ ಬಂದಿದ್ದು, ಅಧಿಕಾರಿಗಳು ಹೊಣೆಯರಿತು ಕೆಲಸ ಮಾಡಬೇಕು. ಅವರಿಗೆ ಎಚ್ಚರಿಕೆಯ ಸಂದೇಶ ನೀಡುವುದು ಕೂಡ ಈ ತೀರ್ಮಾನದ ಹಿಂದಿನ ಉದ್ದೇಶ ಎಂದು ವಿವರಿಸಿದರು.

ಆದೇಶ ಬಂದಿಲ್ಲ: `ಉದ್ಯಮಿ ರಿಪ್ಪನ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿರುವ ಬಗ್ಗೆ ಸರ್ಕಾರದಿಂದ ಈವರೆಗೆ ಅಧಿಕೃತ ಆದೇಶ ಬಂದಿಲ್ಲ. ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ ನಂತರ ಆ ಬಗ್ಗೆ ಪ್ರತಿಕ್ರಿಯಿಸುತ್ತೇನೆ' ಎಂದು ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ತಿಳಿಸಿದ್ದಾರೆ.

`ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಅಂಶಗಳ ಬಗ್ಗೆ ತನಿಖೆ ನಡೆಯಬೇಕಿದೆ. ರಿಪ್ಪನ್ ಅವರೇ ಆ ಪತ್ರ ಬರೆದಿದ್ದರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪತ್ರವನ್ನು ಲಿಪಿ ಪರಿಶೋಧನಾ ತಜ್ಞರ ಪರಿಶೀಲನೆಗೆ ಕಳುಹಿಸಲು ನಿರ್ಧರಿಸಲಾಗಿದೆ. ರಿಪ್ಪನ್ ಅವರೇ ಆ ಪತ್ರವನ್ನು ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿದ್ದರೆ ಅಥವಾ ಅವರ ಪರವಾಗಿ ಬೇರೆ ವ್ಯಕ್ತಿಗಳು ಪತ್ರ ರವಾನಿಸಿದ್ದರೆ ಎಂಬುದು ತನಿಖೆಯ ನಂತರವಷ್ಟೇ ಗೊತ್ತಾಗಲಿದೆ' ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಕಾನೂನು ಪ್ರಕಾರ ವಿಚಾರಣೆ: `ರಿಪ್ಪನ್ ವಿರುದ್ಧ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ದೂರು ಆಧರಿಸಿ ಕಾನೂನು ಪ್ರಕಾರ ಅವರಿಗೆ ನೋಟಿಸ್ ಜಾರಿ ಮಾಡಿದ ನಂತರವಷ್ಟೇ ಜೂನ್ 26ರಂದು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಅವರು ನೀಡಿದ ಹೇಳಿಕೆಯನ್ನು ಇನ್‌ಸ್ಪೆಕ್ಟರ್‌ಗಳು ದಾಖಲಿಸಿಕೊಂಡಿದ್ದಾರೆ' ಎಂದು ಸಿಸಿಬಿ ಡಿಸಿಪಿ ದೇವರಾಜು ತಿಳಿಸಿದ್ದಾರೆ.

`ರಿಪ್ಪನ್ ಅವರಿಂದ ವಂಚನೆಗೊಳಗಾಗಿದ್ದ ಹೂಡಿಕೆದಾರರು ನಗರ ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟಿದ್ದರು. ಆ ದೂರುಗಳನ್ನು ಆಧರಿಸಿ ಕಮಿಷನರ್ ಅವರು ಪ್ರಕರಣ ತನಿಖೆಯನ್ನು ಸಿಸಿಬಿಗೆ ವಹಿಸಿದ್ದರು. ಹೂಡಿಕೆದಾರರ ಹಣವನ್ನು ಹಿಂದಿರುಗಿಸಿ, ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ರಿಪ್ಪನ್ ಅವರಿಗೆ ಕಟ್ಟುನಿಟ್ಟಾಗಿ ತಿಳಿಸಿದ್ದೆವು' ಎಂದು ಹೇಳಿದ್ದಾರೆ.

ಭೇಟಿ ಮಾಡಿಲ್ಲ: `ರಿಪ್ಪನ್ ಯಾರೆಂದು ನನಗೆ ಗೊತ್ತಿಲ್ಲ. ಅವರು ನನ್ನನ್ನು ಭೇಟಿ ಮಾಡಿಯೇ ಇಲ್ಲ. ಕಮಿಷನರ್ ಕಚೇರಿಗೆ ಬರುವ ಪ್ರತಿ ಸಂದರ್ಶಕನ ವಿವರವನ್ನು ಸಂದರ್ಶಕರ ದಾಖಲಾತಿ ಪುಸ್ತಕದಲ್ಲಿ ನಮೂದಿಸಲಾಗಿರುತ್ತದೆ. ಆ ದಾಖಲಾತಿ ಪುಸ್ತಕವನ್ನು ಪರಿಶೀಲಿಸಿದರೆ, ರಿಪ್ಪನ್ ನನ್ನನ್ನು ಭೇಟಿಯಾಗಿದ್ದರೆ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ' ಎಂದು ಗೃಹ ಇಲಾಖೆ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದ್ದಾರೆ.

`ರಿಪ್ಪನ್ ಅವರ ಜತೆ ನಾನು ದೂರವಾಣಿಯಲ್ಲಿ ಮಾತನಾಡಿದ್ದರೆ ಆ ಕರೆಗಳ ವಿವರ ಸಿಗುತ್ತದೆ. ಆ ದೂರವಾಣಿ ಕರೆಗಳ ದಾಖಲೆಯನ್ನು ಪರಿಶೀಲಿಸಬಹುದು. ರಿಪ್ಪನ್ ಅವರ ಬಳಿ ಹಣಕ್ಕಾಗಿ ಯಾರು ಬೇಡಿಕೆ ಇಟ್ಟಿದ್ದರು ಎಂಬುದು ಗೊತ್ತಿಲ್ಲ. ಕಮಿಷನರ್ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.