ADVERTISEMENT

ಮಳೆಗಾಲ ಬಂದರೂ ಕೆರೆಗಳ ಹೂಳೆತ್ತದ ಆಡಳಿತ

​ಪ್ರಜಾವಾಣಿ ವಾರ್ತೆ
Published 10 ಜೂನ್ 2017, 19:55 IST
Last Updated 10 ಜೂನ್ 2017, 19:55 IST
ಬತ್ತಿ ಹೋಗಿರುವ ಕೆರೆ
ಬತ್ತಿ ಹೋಗಿರುವ ಕೆರೆ   

ಸೂಲಿಬೆಲೆ: ತಾಲೂಕಿನಲ್ಲಿ ಬಹುತೇಕ ಕೆರೆ, ಕುಂಟೆಗಳು ಹೂಳಿನಿಂದ ತುಂಬಿ ಹೋಗಿವೆ. ರಾಜಕಾಲುವೆಗಳು ಮಾಯವಾಗಿವೆ. ಮಳೆಗಾಲ ಪ್ರಾರಂಭವಾದರೂ ಕೆರೆಗಳ ಪುನಶ್ಚೇತನಕ್ಕೆ ಮಾತ್ರ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.

‘ಕಳೆದ ವರ್ಷ ಭೀಕರ ಬರಗಾಲ ಪರಿಸ್ಥಿತಿ ಎದುರಿಸಿದ್ದರೂ, ಈ ಬಾರಿ ಮಳೆ ನೀರು ಸಂಗ್ರಹಿಸಲು ಮುನ್ನೆಚ್ಚರಿಕೆ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಕೆರೆಗಳ ಪುನಶ್ಚೇತನಕ್ಕಾಗಿ ‘ಕೆರೆ ಸಂಜೀವಿನಿ’ ಎಂಬ ಯೋಜನೆ ಅಡಿ  ಪ್ರತಿ ತಾಲ್ಲೂಕಿಗೆ ₹15 ಲಕ್ಷ ನೀಡಿದೆ. ಆದರೆ, ತಾಲ್ಲೂಕಿನ ಯಾವ ಕೆರೆಗಳಲ್ಲೂ ಹೂಳೆತ್ತುವ ಕೆಲಸ ಪ್ರಾರಂಭವಾಗಿಲ್ಲ. ಇದರಿಂದ ನಂತರದ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗುತ್ತದೆ’ ಎಂದು  ಕೃಷಿಕ ರಾಮಯ್ಯ ಹೇಳಿದರು.

ADVERTISEMENT

‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಾಕಷ್ಟು ಪರದಾಡಿದ್ದೇವೆ. ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತಿದೆ. ಇದನ್ನು ಸಂಗ್ರಹಿಸಿದರೆ, ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ. ಕುಡಿಯುವ ನೀರಿಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತದೆ. ಸುಲಭದಲ್ಲಿ ಆಗುವ ಕೆಲಸವನ್ನು ಮಾತ್ರ ಮಾಡುವುದಿಲ್ಲ’ ಎಂದು ಆರೋಪಿಸಿದರು.

ತೆರವುಗೊಳ್ಳದ ರಾಜ ಕಾಲುವೆ ಒತ್ತುವರಿ: ರಾಜಕಾಲುವೆಗಳು ಒತ್ತುವರಿಯಾಗಿವೆ. ಕೆಲವು ಕಾಲುವೆಗಳು ಮೂರ್ನಾಲ್ಕು ಅಡಿಗಳಷ್ಟೇ ಇವೆ. ಹೆದ್ದಾರಿ ಪಕ್ಕದಲ್ಲಿರುವ ಕಾಲುವೆಗಳು ಮುಚ್ಚಿಹೋಗಿವೆ. ಇದರಿಂದ ಮಳೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತದೆ. ಇದರಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗುವ ಮಟ್ಟ ಕುಸಿದಿದೆ.

ತ್ಯಾಜ್ಯದ ಆಗರವಾದ ಕೆರೆಗಳು: ‘ನೀರು ಬತ್ತಿ ಹೋಗಿರುವ ಕೆರೆಗಳಿಗೆ ಕೆಲವರು ಕಟ್ಟಡ ತ್ಯಾಜ್ಯ ಹಾಗೂ ಮಾಂಸದ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದಾರೆ. ಸ್ಥಳೀಯಾಡಳಿತ ಕೆರೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದೆ ಕಡೆಗಣಿಸುತ್ತಿದೆ’ ಎಂದು ಸ್ಥಳೀಯ ನಿವಾಸಿ ಆನಂದ್‌ ದೂರಿದರು.

ಕೋಳಿ ಅಂಗಡಿಗಳಿಗೆ ನೋಟಿಸ್‌
‘ಕೆರೆ ಅಂಗಳ ಹಾಗೂ ರಸ್ತೆ ಬದಿಯಲ್ಲಿ ತಾಜ್ಯ ತಂದು ಸುರಿಯುತ್ತಿರುವ ಬಗ್ಗೆ ಇಒಗಳು ಮಾಹಿತಿ ನೀಡಿದ್ದಾರೆ. ಕೋಳಿ ಅಂಗಡಿಗಳಿಂದ ತ್ಯಾಜ್ಯದ ಸಮಸ್ಯೆ ಉಂಟಾಗುತ್ತಿದೆ. ರಾತ್ರಿ ವೇಳೆಯಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಕ್ರಮ ಕೈಗೊಳ್ಳಲು ಸಾದ್ಯವಾಗುತ್ತಿಲ್ಲ. ನಮ್ಮ ವಾಪ್ತಿಯ ಎಲ್ಲಾ ಕೋಳಿ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ’ ಎಂದು ಬೆಂಗಳೂರು ಗ್ರಾಮಾಂತರ ಸಿಇಒ ದಯಾನಂದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.