ADVERTISEMENT

ಮಳೆಯಾದರೂ ತುಂಬದ ಕೆರೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 20:20 IST
Last Updated 9 ಅಕ್ಟೋಬರ್ 2011, 20:20 IST

ದೇವನಹಳ್ಳಿ: ಎರಡು ತಾಸು ಗಟ್ಟಿ ಮಳೆ ಸುರಿದರೆ ಸಾಕು ಕೆರೆ ತುಂಬಿ ಕೋಡಿ ಬೀಳುತ್ತಿತ್ತು, ಆದರೆ ಈಗ  ವಾರಗಟ್ಟಲೆ  ಮಳೆ ಸುರಿದರೂ ಕೆರೆ ತುಂಬದ ಸ್ಥಿತಿಯಲ್ಲಿದೆ !

ಇದು ತಾಲ್ಲೂಕಿನ ರಾಮನಾಥಪುರ ಸಮೀಪದ ಕೆರೆಯ ಸ್ಥಿತಿ. ಇದಕ್ಕೆ ಪ್ರಮುಖ ಕಾರಣ, ಜಲಾನಯನ ಪ್ರದೇಶಗಳೆಲ್ಲ ಒತ್ತುವರಿಯಾಗಿರುವುದು. ಹೀಗಾಗಿ ಎಷ್ಟು ಮಳೆ ಸುರಿದರೂ ನೀರು ಕೆರೆಗೆ ಹರಿಯದ ಸ್ಥಿತಿ ನಿರ್ಮಾಣವಾಗಿದೆ.

ಕೊಯಿರಾ ಗ್ರಾಮದ ಉತ್ತರ ಭಾಗ ಮಾಯಸಂದ್ರ ಮೀಸಗಾನಹಳ್ಳಿ ಗ್ರಾಮಗಳ ಬೆಟ್ಟ, ಗುಡ್ಡ ಹಾಗೂ ಬಯಲೇ ಈ ಕೆರೆಗೆ ಕ್ಯಾಚ್‌ಮೆಂಟ್ ಪ್ರದೇಶ. ಈ ಭಾಗದಲ್ಲಿ ಕಲ್ಲುಗಣಿಗಾರಿಕೆ ಹೆಚ್ಚಾಗಿದ್ದು, ಎಷ್ಟು  ಮಳೆ ಸುರಿದರೂ ಬೆಟ್ಟಗಳಿಂದ ಹರಿಯುವ ನೀರು ದಾರಿ ಬದಲಿಸುತ್ತಿವೆ.

ಕೆರೆ ಹೀಗಿದೆ: ಸುಮಾರು 152 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿರುವ  ಈ ಕೆರೆಯ ಅಂಗಳ 35.3 ಎಕರೆ ವಿಸ್ತೀರ್ಣ ಹೊಂದಿದೆ. ಮುನ್ನೂರು ವರ್ಷಗಳ ಇತಿಹಾಸವಿರುವ ಈ  ಕೆರೆ ರಾಮನಾಥಪುರ ಸುತ್ತಲಿನ ಕೃಷಿ ಚಟುವಟಿಕೆಗೆ ಜಲಾಧಾರವಾಗಿದೆ. ಒಂದು ತೂಬು, ಒಂದೇ ಕೋಡಿ ಹೊಂದಿರುವ ಕೆರೆ ತುಂಬಿ ಹದಿನೈದು ವರ್ಷಗಳಾಗಿವೆ. `ಕೆರೆ ಅರ್ಧ ತುಂಬಿದರೂ ಸಾಕು ವರ್ಷಕ್ಕಾಗುವಷ್ಟು ಭತ್ತ ಬೆಳೆಯುತ್ತೇವೆ. ಜಲಾನಯನ ಪ್ರದೇಶ ವಿರೂಪವಾಗಿರುವುದರಿಂದ ಕೆರೆ ತುಂಬುವ ಭರವಸೆ ಇಲ್ಲ~ ಎಂದು ನಿರಾಸೆಯಿಂದ ನುಡಿಯುತ್ತಾರೆ ರೈತರಾದ ಮುನಿ ಆಂಜಿನಪ್ಪ, ಮುನಿರಾಜಪ್ಪ, ಮಂಜುನಾಥ್ ಕೃಷ್ಣಪ್ಪ.

ಗಣಿಗಾರಿಕೆಯತ್ತ ಒಲವು: ಅಕ್ಕಪಕ್ಕದಲ್ಲೇ ಇರುವ ಕೊಯಿರಾ ಅರುವನಹಳ್ಳಿ, ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಬಗ್ಗೆ ಹೆಚ್ಚು ಒಲವು ತೋರುವ ಗ್ರಾಮಸ್ಥರು, ಕೆರೆ ಸಂರಕ್ಷಣೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. `ಒಂದು ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಶೇ 50 ರಷ್ಟು ರೈತರಿದ್ದಾರೆ. ಇನ್ನುಳಿದಂತೆ ಕೂಲಿ ಕಾರ್ಮಿಕರ್ದ್ದಿದಾರೆ.

ಇವರೆಲ್ಲ ಒಗ್ಗಟ್ಟಾಗಿ ಕೆರೆ ಅಭಿವೃದ್ಧಿಗೆ ಮಹಿಳಾ ಸಂಘ, ಯುವಕ ಸಂಘ ರಚನೆ ಮಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಮತ್ತೊಮ್ಮೆ ಕೆರೆಯಲ್ಲಿ ಸಮೃದ್ಧ ನೀರನ್ನು ಕಾಣಬಹುದು ಎಂಬುದು ಗ್ರಾಮಸ್ಥರ ಅಭಿಪ್ರಾಯ.         
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.