ADVERTISEMENT

ಮಳೆಯ ಆರ್ಭಟ: ಮೆಜೆಸ್ಟಿಕ್‌ ಸುತ್ತ ಎರಡು–ಮೂರು ತಾಸು ಟ್ರಾಫಿಕ್‌ ಜಾಮ್, ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 17:10 IST
Last Updated 13 ಅಕ್ಟೋಬರ್ 2017, 17:10 IST
ಮಳೆಯ ಆರ್ಭಟ: ಮೆಜೆಸ್ಟಿಕ್‌ ಸುತ್ತ ಎರಡು–ಮೂರು ತಾಸು ಟ್ರಾಫಿಕ್‌ ಜಾಮ್, ವಾಹನ ಸವಾರರ ಪರದಾಟ
ಮಳೆಯ ಆರ್ಭಟ: ಮೆಜೆಸ್ಟಿಕ್‌ ಸುತ್ತ ಎರಡು–ಮೂರು ತಾಸು ಟ್ರಾಫಿಕ್‌ ಜಾಮ್, ವಾಹನ ಸವಾರರ ಪರದಾಟ   

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ 6.15ರಿಂದ 40 ನಿಮಿಷ ಗುಡುಗು–ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಮಳೆಗೆ ಕೇಂದ್ರ ಬಿಂದು ಎನಿಸಿರುವ ಮೆಜೆಸ್ಟಿಕ್‌ ಸುತ್ತ ಸೇರಿದಂತೆ ಸಂಚಾರ ಅಸ್ತವ್ಯಸ್ಥವಾಗಿ, ವಾಹನಗಳು ಎರಡು–ಮೂರು ತಾಸು ನಿಂತಲ್ಲೆ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು.

ಓಕಳಿಪುರ ಜಂಕ್ಷನ್‌ನ ರೈಲ್ವೆ ಕೆಳ ಸೇತುವೆಯಲ್ಲಿ ನೀರು ಜಮಾವಣೆಯಾಗಿದ್ದರಿಂದ ವಾಹನಗಳು ಸಂಚರಿಸದ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಈ ಜಂಕ್ಷನ್‌ಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ಸಾವಿರಾರು ವಾಹನಗಳು ಹಿಂದೆ–ಮುಂದೆ ಯಾವ ಕಡೆಗೂ ಹೋಗಲು ದಾರಿ ಇಲ್ಲದೆ ನಿಂತಲ್ಲೆ ನಿಂತಿದ್ದವು.

ಓಕಳಿಪುರ ಜಂಕ್ಷನ್‌ ಹಾಗೂ ಮೆಜೆಸ್ಟಿಕ್‌ನಿಂದ ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಜಂಕ್ಷನ್‌ವರೆಗೆ ವಾನಗಳು ಸಾಲುಗಟ್ಟಿದ್ದವು. ಈ ಜಂಕ್ಷನ್‌ನಲ್ಲಿ ಎಲ್ಲಾಕಡೆಯಿಂದ ವಾಹನಗಳು ಜಮಾಯಿಸಿದ್ದರಿಂದ ಎತ್ತಕಡೆಗೂ ಹೋಗಲು ದಾರಿ ಇಲ್ಲದೆ ಜಾಮ್‌ ಆಗಿತ್ತು. ಇದೇ ಸ್ಥಿತಿ ಸುಜಾತ ಜಂಕ್ಷನ್‌ನಲ್ಲೂ ಇತ್ತು. 

ADVERTISEMENT

ಒಳ ಮಾರ್ಗದ ಕಿರುದಾರಿಗಳಲ್ಲೂ ಜಾಮ್‌
ಓಕಳಿಪುರ ಜಂಕ್ಷನ್‌ನಲ್ಲಿ ಜಾಮ್ ಆಗಿದ್ದರಿಂದ ಓಕಳಿಪುರ– ಶ್ರೀರಾಂಪುರದ ಒಳಭಾಗದ ಕಿರು ರಸ್ತೆಗಳಿಗೆ ಹೆಚ್ಚಿನ ವಾಹನಗಳು ನುಗ್ಗಿದ್ದರಿಂದ ಅಲ್ಲಿಯೂ ಜಾಮ್ ಆಗಿ ಜನರು ಅಯ್ಯೋ ರಾಮಾ... ಇದೆಂತಾ ಸ್ಥಿತಿ, ಹೇಗೆ ಹೋಗುವುದು, ಎತ್ತ ಹೋಗುವುದು ಎಂದು ದಿಕ್ಕುತೋಚದಂತಾಗಿ ನಿಂತಲ್ಲೆ ನಿಂತು, ಆಮೆ ವೇಗದಲ್ಲಿ ತುಸು ತುಸು ಮುಂದಕ್ಕೆ ತೆವಳುತ್ತಾ ಸಾಗುತ್ತಿದ್ದರು.

ಜೋರಾಗಿ ಸುರಿದು ಹೋಗಿದ್ದ ಮಳೆ 8ರ ಸುಮಾರಿಗೆ ಮತ್ತೆ ಬೀಳಲಾರಂಭಿಸಿತು. ಹೀಗಾಗಿ, ಜನರು ಮಳೆಯಲ್ಲಿಯೇ ನೆನೆಯುತ್ತಾ ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.