ADVERTISEMENT

ಮಳೆ ನೀರು ಸಂಗ್ರಹ: ಕೋರ್ಟ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:05 IST
Last Updated 18 ಸೆಪ್ಟೆಂಬರ್ 2013, 19:05 IST

ಬೆಂಗಳೂರು: ಮಳೆನೀರಿನ ಸಂಗ್ರಹ, ಅಂತರ್ಜಲದ ಸಂರಕ್ಷಣೆ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲ್ಯೂಎಸ್‌ಎಸ್‌ಬಿ) ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

ನಗರದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟ ಕೆಲವು ಪ್ರದೇಶಗಳಲ್ಲಿ ಉತ್ತಮವಾಗಿಲ್ಲ ಎಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ನೇತೃತ್ವದ ವಿಭಾಗೀಯ ಪೀಠ, ‘ನಗರದ ಕೆರೆಗಳನ್ನು ಸಂರಕ್ಷಿಸುವ ಕೆಲಸವೂ ಆದ್ಯತೆಯ ಮೇರೆಗೆ ನಡೆಯಬೇಕು. ಕೆಲವೆಡೆ ಕೆರೆಗಳನ್ನು ನುಂಗಿ ಬಡಾವಣೆ ನಿರ್ಮಿಸಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿತು.

ನೀರಿನ ಮೂಲಗಳು ಕಲುಷಿತ­ಗೊಳ್ಳದಂತೆ ನೋಡಿ­ಕೊಳ್ಳುವುದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾಥಮಿಕ ಕರ್ತವ್ಯ ಆಗಬೇಕು ಎಂದೂ ಪೀಠ ಹೇಳಿತು.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆ ಚೆನ್ನಾಗಿ ಆಗುತ್ತಿದೆ. ಆದರೆ ಮಳೆ ನೀರಿನ ಸಂಗ್ರಹ ಸರಿಯಾಗಿ ಆಗುತ್ತಿಲ್ಲ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಹೊಸ­ದಾಗಿ ಸೇರಿದ 110 ಹಳ್ಳಿಗಳ ಕೊಳವೆ ಬಾವಿ ನೀರನ್ನು ಶುದ್ಧೀಕರಿಸಿ ಜನರಿಗೆ ನೀಡಲು ನಿರ್ಧರಿಸಲಾಗಿದೆ. ಈಗ ಟ್ಯಾಂಕರ್‌ ಮೂಲಕ ಅವರಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಲಮಂಡಳಿ ಪರ ವಕೀಲರು ವಿವರಿಸಿದರು.

ಅಲ್ಲಿ ನೀರನ್ನು ಉಚಿತವಾಗಿ ನೀಡು­ತ್ತಿರುವ ಕಾರಣ, ಜನರಲ್ಲಿ ಮಿತವ್ಯಯದ ಧೋರಣೆ ಕಾಣುತ್ತಿಲ್ಲ. ಹಾಗಾಗಿ ಪೂರೈ­-ಸುವ ನೀರಿಗೆ ಶುಲ್ಕ ವಿಧಿಸುವ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು. ವಿಚಾರಣೆ ಮುಂದೂಡ­ಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.