ADVERTISEMENT

ಮಹಡಿ ಏರಿದ ಭೂಪನಿಗೆ ಪೊಲೀಸ್ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಬೆಂಗಳೂರು: ಯೋಗಗುರು ಬಾಬಾ ರಾಮ್‌ದೇವ್ ಅವರ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿಕೊಂಡು ಯುವಕನೊಬ್ಬ ಹೆಬ್ಬಾಳ ಸಮೀಪದ ಶಾಂತಿವನ ಬಡಾವಣೆಯಲ್ಲಿನ 24 ಅಂತಸ್ತಿನ `ಬೆರೀಸ್ ಲೇಕ್‌ಸೈಡ್ ಹ್ಯಾಬಿಟ್ಯಾಟ್~ ಅಪಾರ್ಟ್‌ಮೆಂಟ್‌ನ ತುದಿಗೆ ಏರಿ ಕುಳಿತಿದ್ದರಿಂದ ಸ್ಥಳದಲ್ಲಿ ಭಾನುವಾರ ಆತಂಕ ಸೃಷ್ಟಿಯಾಗಿತ್ತು.

ಈ ಕೃತ್ಯ ಎಸಗಿದ ಸಚಿನ್ ರಾಮಚಂದ್ರ ಮೋಹಿತೆ (23) ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಬಳಿಕ ಬಿಡುಗಡೆಗೊಳಿಸಿದರು.

ಮೂಲತಃ ಬೆಳಗಾವಿಯ ಸಚಿನ್ ಐಟಿಐ ಓದಿದ್ದಾನೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಅಪಾರ್ಟ್‌ಮೆಂಟ್‌ನ ಬಳಿ ಬಂದ ಆತ ಅಲ್ಲಿನ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಕಾಂಪೌಂಡ್ ನೆಗೆದು ಅಪಾರ್ಟ್‌ಮೆಂಟ್‌ನ ಗೋಡೆ ಹಿಡಿದು ಮೇಲಕ್ಕೆ ಹತ್ತಲಾರಂಭಿಸಿದ.

ಇದನ್ನು ಕಂಡ ಭದ್ರತಾ ಸಿಬ್ಬಂದಿ ಕೆಳಗಿಳಿಯುವಂತೆ ಮನವಿ ಮಾಡಿದರೂ ಆತ ಕೇಳಲಿಲ್ಲ. ನಂತರ ಭದ್ರತಾ ಸಿಬ್ಬಂದಿ ಲಿಫ್ಟ್‌ನ ಮೂಲಕ ಅಪಾರ್ಟ್‌ಮೆಂಟ್‌ನ ಕೊನೆಯ ಮಹಡಿಗೆ ತೆರಳಿ ಆತನನ್ನು ಹಿಡಿದು ಠಾಣೆಗೆ ಕರೆದುಕೊಂಡು ಬಂದರು ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಾರನ ಪ್ರೇರಣೆ ಕಾರಣ: ಖಾಸಗಿ ಸುದ್ದಿ ವಾಹಿನಿಯ ವರದಿಗಾರರೊಬ್ಬರಿಗೆ ಪರಿಚಿತನಾದ ಸಚಿನ್‌ಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಈ ವಿಷಯ ತಿಳಿದಿದ್ದ ಆ ವರದಿಗಾರ ಅಪಾರ್ಟ್‌ಮೆಂಟ್‌ನ ಕೊನೆಯ ಮಹಡಿಗೆ ಏರಿ ಕುಳಿತರೆ ಪ್ರಚಾರ ಸಿಗುತ್ತದೆ ಮತ್ತು ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ ಎಂದು ಪುಸಲಾಯಿಸಿ ಅಪಾರ್ಟ್‌ಮೆಂಟ್ ಏರುವಂತೆ ಸಚಿನ್‌ಗೆ ಹುರಿದುಂಬಿಸಿದ್ದ. ಈ ಸಂಗತಿಯನ್ನು ಸಚಿನ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಕೊಡಿಗೇಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಸಚಿನ್ ಅಪಾರ್ಟ್‌ಮೆಂಟ್‌ನ ಗೋಡೆ ಏರುವ ದೃಶ್ಯಾವಳಿಯನ್ನು ಕ್ಯಾಮೆರಾದಲ್ಲಿ `ಎಕ್ಸ್‌ಕ್ಲ್ಯೂಸಿವ್~ ಆಗಿ ಸೆರೆ ಹಿಡಿದು ಸುದ್ದಿ ಪ್ರಸಾರ ಮಾಡುವುದು ವರದಿಗಾರನ ಉದ್ದೇಶವಾಗಿತ್ತು. ಅಪಾರ್ಟ್‌ಮೆಂಟ್ ಏರಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಸಚಿನ್ ಮತ್ತು ಆತನಿಗೆ ಪ್ರೇರಣೆ ನೀಡಿದ ವರದಿಗಾರನ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದೆವು. ಆದರೆ ಆ ವರದಿಗಾರ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರಿಂದ ಆತನ ವಿರುದ್ಧ ದೂರು ದಾಖಲಿಸುವ ನಿರ್ಧಾರವನ್ನು ಕೈಬಿಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.