ADVERTISEMENT

ಮಹಾಂತೇಶ್ ಕೊಲೆ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:30 IST
Last Updated 22 ಮೇ 2012, 19:30 IST

ಬೆಂಗಳೂರು: ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕ ಎಸ್.ಪಿ.ಮಹಾಂತೇಶ್ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ದಕ್ಷ ಅಧಿಕಾರಿಗಳಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಿಧಾನಸೌಧದ ಮುಂದೆ ಮಂಗಳವಾರ ಕಪ್ಪು ಬಟ್ಟೆ ಧರಿಸಿ ಸತ್ಯಾಗ್ರಹ ನಡೆಸಿದರು. `ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಕೆಲ ಸೂಕ್ಷ್ಮ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು~ ಎಂದು ಅವರು ಆಗ್ರಹಿಸಿದರು.

`ಮಹಾಂತೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಇಂತಹ ಅನಾಹುತಗಳು ಮರಕಳಿಸದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು~ ಎಂದು ರಾಜ್ಯ ಸಹಕಾರಿ ಲೆಕ್ಕ ಪರಿಶೋಧನಾ ಸಿಬ್ಬಂದಿ ಸಂಘದ ಕಾರ್ಯದರ್ಶಿ ರಾಮಚಂದ್ರರೆಡ್ಡಿ ಒತ್ತಾಯಿಸಿದ್ದಾರೆ.

`ಇತ್ತೀಚೆಗಷ್ಟೆ ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ಅವರ ಹತ್ಯೆಯಾಗಿತ್ತು. ಈಗ ಮಹಾಂತೇಶ್ ಅವರು ಕೊಲೆಯಾಗಿದ್ದಾರೆ. ರಾಜ್ಯದಲ್ಲಿ ಅಧಿಕಾರಿಗಳು ನಿರ್ಭಯವಾಗಿ ಕೆಲಸ ಮಾಡುವ ಪರಿಸ್ಥಿತಿ ಹೊರಟು ಹೋಗಿದ್ದರೂ, ಕಾನೂನು ವ್ಯವಸ್ಥೆ ಉತ್ತಮವಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿರುವುದು ಖಂಡನೀಯ~ ಎಂದು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಮಹಾಂತೇಶ್ ಸಾವಿನ ಪ್ರಕರಣ ಬೇರೆ ಆಯಾಮ ಪಡೆದುಕೊಳ್ಳುವ ಮುನ್ನ ಇದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಪ್ರತಿ ಪ್ರಕರಣಗಳಲ್ಲೂ ಸರ್ಕಾರ ಈ ರೀತಿ ಮೌನವಾಗುವುದು ದುಷ್ಕರ್ಮಿಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಹಾಗೂ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿದರೆ ಮಹಾಂತೇಶ್ ಆತ್ಮಕ್ಕೆ ಶಾಂತಿ ದೊರೆಯಬಹುದು~ ಎಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹೇಳಿದ್ದಾರೆ.

`ಮಹಾಂತೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಭಿನ್ನ ಹೇಳಿಕೆ ನೀಡುವ ಮೂಲಕ ಗೊಂದಲವನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಈ ಸಾವಿನ ಹಿಂದಿನ ಸತ್ಯವನ್ನು ಕೂಡಲೇ ಬಹಿರಂಗಪಡಿಸಿ~ ಎಂದು ಅಖಿಲ ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮಿತಿ ಆಗ್ರಹಿಸಿದೆ.

ತನಿಖೆ ಚುರುಕು
ಬೆಂಗಳೂರು:
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ತನಿಖಾಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ತನಿಖಾ ತಂಡವನ್ನು ಹೊರ ರಾಜ್ಯಗಳಿಗೂ ಕಳುಹಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.