ADVERTISEMENT

ಮಹಿಳಾ ದೌರ್ಜನ್ಯ ಮಹಾ ಕ್ರೌರ್ಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 18:30 IST
Last Updated 20 ಸೆಪ್ಟೆಂಬರ್ 2011, 18:30 IST
ಮಹಿಳಾ ದೌರ್ಜನ್ಯ ಮಹಾ ಕ್ರೌರ್ಯ
ಮಹಿಳಾ ದೌರ್ಜನ್ಯ ಮಹಾ ಕ್ರೌರ್ಯ   

ಬೆಂಗಳೂರು: `ಮಹಿಳೆಯರನ್ನು ಪೂಜಿಸಬೇಕು ಎಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ಆದರೆ ವಾಸ್ತವವಾಗಿ ಮಹಿಳೆಯರ ಮೇಲೆ ದೌರ್ಜನ್ಯಗಳು ಈಗಲೂ ನಡೆಯುತ್ತಲೇ ಇವೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ವಿಷಾದಿಸಿದರು.

`ವಿಜ್ಞಾನೇಶ್ವರ ರಾಜಕೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ~ಯ ಸಹಯೋಗದಲ್ಲಿ ಭಾರತೀಯ ವಿದ್ಯಾಭವನವು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾ ಜೋಯಿಸ್ ಅವರು ಸಂಪಾದಿಸಿದ `ಸಂಸತ್ ಭವನದಿಂದ ಸಂದೇಶಗಳು: ಭಾರತ~ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

 `ಸ್ತ್ರೀಯರ ಮೇಲಿನ ದೌರ್ಜನ್ಯಕ್ಕಿಂತ ಮತ್ತೊಂದು ದೊಡ್ಡ ಕ್ರೌರ್ಯವಿಲ್ಲ. ಮಾತೃ ದೇವೋ ಭವ ಎಂಬ ಮಾತು ತೈತ್ತರೀಯ ಉಪನಿಷತ್ತಿನಲ್ಲಿ ಉಲ್ಲೇಖವಾಗಿದೆ. ಅಲ್ಲದೇ ತಾಯಿ ದೇವರು ಎಂಬುದು ಸಮಾಜದಲ್ಲಿ ಅತ್ಯಂತ ದೊಡ್ಡ ಮೌಲ್ಯ~ ಎಂದರು.

`ಪೂರ್ವ ಮತ್ತು ಪಶ್ಚಿಮದ ದೇಶಗಳು ಪರಸ್ಪರ ಬೆರೆಯಬೇಕು. ಅಂದಾಗ ಹೊಸ ಚಿಂತನೆಗಳು ಮೂಡುತ್ತವೆ. ಈ ಹಿನ್ನೆಲೆಯಲ್ಲಿ ರವೀಂದ್ರನಾಥ ಟ್ಯಾಗೋರರ ಚಿಂತನೆಗಳು ಮತ್ತು ಅವರ ಗೀತಾಂಜಲಿ ಗೀತಗುಚ್ಛ ಇದಕ್ಕೆ ಪೂರಕವಾಗಿವೆ~ ಎಂದು ಅವರ ಅಭಿಪ್ರಾಯ ಪಟ್ಟರು.

ಡಾ.ಎಂ.ರಾಮಾ ಜೋಯಿಸ್ ಮಾತನಾಡಿ, `ನಾನು ರಾಜ್ಯಸಭೆಗೆ ಆಯ್ಕೆಯಾದ ಮೇಲೆ ಸಂಸತ್ ಭವನದ ವಿವಿಧೆಡೆ ಬರೆಯಲಾದ ಶ್ಲೋಕಗಳು ಗಮನ ಸೆಳೆದವು. ಹಲವಾರು ಜೀವನ ಮೌಲ್ಯಗಳನ್ನು ತಿಳಿಸುವ ಇವುಗಳನ್ನು ಸಂಗ್ರಹಿಸಿ ನೀಡಬೇಕು ಎಂಬ ಉದ್ದೇಶದಿಂದ ಸಂಕಲನ ಕಾರ್ಯ ಕೈಗೊಂಡೆ. ಇವುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರಿಗೆ, ಸಂಸದರಿಗೆ ವಿತರಿಸಲಾಗುವುದು~ ಎಂದು ಹೇಳಿದರು.

`ಧರ್ಮ ಮತ್ತು ನ್ಯಾಯಾಂಗದಲ್ಲಿ ಯಾವುದು ಶ್ರೇಷ್ಠ ಎನ್ನುವ ಪ್ರಶ್ನೆ ಬಂದಾಗ, ವೇದಗಳಿಂದ ಸಮೃದ್ಧವಾದ ಧರ್ಮವೇ ಶ್ರೇಷ್ಠವಾಗುತ್ತದೆ~ ಎಂದರು. 

ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.