ADVERTISEMENT

ಮಹಿಳೆಯರ ಸರ ಅಪಹರಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:50 IST
Last Updated 8 ಫೆಬ್ರುವರಿ 2011, 18:50 IST

ಬೆಂಗಳೂರು: ನಗರದ ಮಲ್ಲೇಶ್ವರ ಮತ್ತು ರಾಮಮೂರ್ತಿನಗರದಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಇಬ್ಬರು ಮಹಿಳೆಯರ ಚಿನ್ನದ ಸರ ದೋಚಿದ್ದಾರೆ.
ಆಟೊದಲ್ಲಿ ಬಂದ ಕಿಡಿಗೇಡಿಯೊಬ್ಬ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಈ ಬಗ್ಗೆ ಕೃಷ್ಣವೇಣಿ ಎಂಬುವರು ದೂರು ನೀಡಿದ್ದಾರೆ. ಅವರು ಮಲ್ಲೇಶ್ವರ 4ನೇ ಮುಖ್ಯರಸ್ತೆಯಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ವಾಯುವಿಹಾರ ಮಾಡುತ್ತಿದ್ದಾಗ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ. ಸರ ನಲವತ್ತು ಗ್ರಾಂ ತೂಕದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಮೂರ್ತಿನಗರ: ಗುಟ್ಕಾ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ಅಂಗಡಿಯಲ್ಲಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ರಾಮಮೂರ್ತಿನಗರದ ಓಎಂಬಿಆರ್ ಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ. ಶಿವನಂಜಮ್ಮ ಅವರು ಅಂಗಡಿಯಲ್ಲಿದ್ದ ವೇಳೆ ಬಂದ ದುಷ್ಕರ್ಮಿ ಸಿಗರೇಟು ಖರೀದಿಸಿದ. ನಂತರ ಮತ್ತೆ ಬಂದು ಗುಟ್ಕಾ ಕೇಳಿದ ಆತ ಸರ ಕಿತ್ತುಕೊಂಡು ಬೈಕ್‌ನಲ್ಲಿ ಇನ್ನೊಬ್ಬನ ಜತೆ ಪರಾರಿಯಾಗಿದ್ದಾನೆ. ಸರ 45 ಗ್ರಾಂ ತೂಕದ್ದು ಎಂದು ಪೊಲೀಸರು ತಿಳಿಸಿದ್ದಾರೆ. ರಾಮಮೂರ್ತಿನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಮ್ರ ಕಳವು: ಅಂಗಡಿಯೊಂದರ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ತಾಮ್ರದ ತಂತಿ ಕಳವು ಮಾಡಿದ ಘಟನೆ ಜ್ಞಾನಭಾರತಿ ಸಮೀಪದ ಹನುಮಂತನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ಬಗ್ಗೆ ಅಂಗಡಿ ಮಾಲೀಕ ಲಕ್ಷ್ಮಣ್ ನೀಡಿರುವ ದೂರನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಅಪಘಾತ ಸಾವು: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಕೆ.ಆರ್.ಪುರದ ಎ.ನಾರಾಯಣಪುರ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ನಾರಾಯಣಪುರ ನಿವಾಸಿ ಸುಬ್ರಹ್ಮಣಿ (55) ಮೃತಪಟ್ಟವರು. ಪೇಂಟರ್ ಆಗಿದ್ದ ಅವರು ಕೆಲಸ ಮುಗಿಸಿಕೊಂಡು ಸಂಜೆ ಆರು ಗಂಟೆ ಸುಮಾರಿಗೆ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ರಾತ್ರಿ ಎಂಟು ಗಂಟೆ ಸುಮಾರಿಗೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ಸವಾರ ವಾಹನ ಸಮೇತ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

ಆತ್ಮಹತ್ಯೆ: ಹೊಟ್ಟೆ ನೋವು ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಮಾಕ್ಷಿಪಾಳ್ಯದ ಶ್ರೀನಿವಾಸನಗರದಲ್ಲಿ ಸೋಮವಾರ ನಡೆದಿದೆ. ಸರೋಜಾ (40) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿಗೆ ಆಗಾಗ್ಗೆ ಹೊಟ್ಟೆ ನೋವು ಬರುತ್ತಿತ್ತು. ಇದರಿಂದ ಜಿಗುಪ್ಸೆಗೊಂಡ ಆಕೆ ನೇಣು ಹಾಕಿಕೊಂಡಿದ್ದಾಳೆ ಎಂದು ಸರೋಜಾ ಅವರ ಪತಿ ಕೃಷ್ಣಪ್ಪ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಮಾರಾಟ; ವ್ಯಕ್ತಿ ಬಂಧನ: ಆರ್.ಟಿ.ನಗರ ಸಮೀಪದ ತಿಮ್ಮಯ್ಯ ಗಾರ್ಡನ್‌ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜಮೀಲ್ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 80 ಸಾವಿರ ರೂಪಾಯಿ ಮೌಲ್ಯದ ಆರು ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸರ್ದಾರ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರದ ವಾರಂಗಲ್‌ನ ಸರ್ದಾರ್ 10 ವರ್ಷಗಳಿಂದ ನಗರದಲ್ಲಿ ಗಾಂಜಾ ಮಾರುತ್ತಿದ್ದ. ಐಟಿ- ಬಿಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಆತನ ಗ್ರಾಹಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀಲ್, ಸರ್ದಾರ್‌ನಿಂದ ಗಾಂಜಾ ಪಡೆದು ಮನೆಯ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT