ADVERTISEMENT

ಮಹಿಳೆಯ ಕೊಲೆ: ಪೇದೆ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 19:30 IST
Last Updated 15 ಮಾರ್ಚ್ 2011, 19:30 IST

ಬೆಂಗಳೂರು: ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್- ದಕ್ಷಿಣ ವಿಭಾಗ) ಕಾನ್‌ಸ್ಟೆಬಲ್ ಮಾದೇಶ (36) ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮಂಗಳಾ (38) ಎಂಬುವರನ್ನು ಕೊಲೆ ಮಾಡಿದ್ದ. ಆಡುಗೋಡಿಯಲ್ಲಿರುವ ಪೊಲೀಸ್ ವಸತಿ ಸಮುಚ್ಚಯದಲ್ಲಿ ವಾಸವಿದ್ದ ಆತ ಮಂಗಳಾ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಮಂಗಳಾ ಅವರ ಪತಿ 16 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಅವರು ಮಗಳ ಜತೆ ಆಡುಗೋಡಿಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಮಾದೇಶನ ಪೋಷಕರು ಸಂಬಂಧಿಕರ ಮಗಳ ಜತೆ ಆತನ ಮದುವೆ ನಿಶ್ಚಯ ಮಾಡಿದ್ದರು.

ಈ ವಿಷಯ ಮಂಗಳಾಗೆ ಗೊತ್ತಾಗಿದ್ದರಿಂದ ಆಕೆ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮಾದೇಶನಿಗೆ ಒತ್ತಾಯಿಸುತ್ತಿದ್ದಳು.ಇದರಿಂದ ಅತಂಕಗೊಂಡ ಆತ ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ. ಪೂರ್ವಯೋಜಿತ ಸಂಚಿನಂತೆ ಮದುವೆ ವಿಷಯ ಮಾತನಾಡುವ ನೆಪದಲ್ಲಿ ಆತ ಫೆ.19ರಂದು ಮಂಗಳಾ ಮೊಬೈಲ್‌ಗೆ ಕರೆ ಮಾಡಿ ತನ್ನ ಮನೆಗೆ ಕರೆಸಿಕೊಂಡ. ನಂತರ ಮನೆಯಲ್ಲೇ ಆಕೆಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳಿಕ ಶವವನ್ನು ಕಾರಿನಲ್ಲಿ ಸಾಗಿಸಿ ಕನಕಪುರ ಬಳಿಯ ಸಂಗಮ ಸಮೀಪ ನದಿಗೆ ಎಸೆದು ಬಂದಿದ್ದ. ಮಂಗಳಾ ಕಾಣೆಯಾಗಿದ್ದ ಬಗ್ಗೆ ಅವರ ಮಗಳು ದೂರು ಕೊಟ್ಟಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಮಂಗಳಾ ಅವರ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮಾದೇಶನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.

ಸಂಗಮ ಸಮೀಪ ನದಿಯಲ್ಲಿ ಏಳೆಂಟು ದಿನಗಳ ಕಾಲ ಶೋಧ ನಡೆಸಿದರೂ ಅವರ ಶವ ಪತ್ತೆಯಾಗಿಲ್ಲ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಐ ಶರಣ್‌ಗೌಡ ಮತ್ತು ಸಿಬ್ಬಂದಿ ಈ ಪ್ರಕರಣವನ್ನು ಭೇದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.