ADVERTISEMENT

ಮಹಿಳೆ ಕೊಂದು ಚಿನ್ನಾಭರಣ ಲೂಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:44 IST
Last Updated 13 ಏಪ್ರಿಲ್ 2013, 19:44 IST

ಬೆಂಗಳೂರು: ಹಾಡಹಗಲೇ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಪೀಣ್ಯ ಸಮೀಪದ ಬಾಗಲಗುಂಟೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಬಾಡಿಗೆದಾರ ಅನಂತು ಎಂಬಾತ ಈ ಕೊಲೆ ಮಾಡಿರಬಹುದು ಎಂಬ ಶಂಕೆ ಪೊಲೀಸರಿಂದ ವ್ಯಕ್ತವಾಗಿದೆ.

ಪೀಣ್ಯದ ಅಂಚೆ ಕಚೇರಿಯ ಸಿಬ್ಬಂದಿ ಗೋಪಾಲ್ ಎಂಬವರ ಪತ್ನಿ ಭಾರತಿ (45) ಕೊಲೆಯಾದವರು. ದಂಪತಿಗೆ ಐಶ್ವರ್ಯ (14) ಮತ್ತು ಗಗನ್ (12) ಎಂಬ ಇಬ್ಬರು ಮಕ್ಕಳಿದ್ದಾರೆ. ಗೋಪಾಲ್ ದಂಪತಿ, ಸುಮಾರು 20 ವರ್ಷಗಳಿಂದ ಬಾಗಲಗುಂಟೆಯ ಮಾರಮ್ಮ ದೇಗುಲ ಬಳಿ ವಾಸವಾಗಿದ್ದಾರೆ. ಅದು 2 ಅಂತಸ್ತಿನ ಮನೆಯಾಗಿದ್ದು, ಭಾರತಿ ಅವರ ಕುಟುಂಬ ಮೊದಲನೆ ಮಹಡಿಯಲ್ಲಿ ವಾಸವಾಗಿದೆ. ಅವರ ಅಕ್ಕ ಪುಷ್ಪಾ ನೆಲ ಅಂತಸ್ತಿನಲ್ಲಿ ವಾಸವಾಗಿದ್ದಾರೆ.

`ಅಮೃತಹಳ್ಳಿ ಸಮೀಪದ ದಾಸನಪುರದಲ್ಲಿ ಗೋಪಾಲ್ ಅವರ ಸಂಬಂಧಿಕರು ಸಾವನ್ನಪ್ಪಿದ್ದರು. ಹೀಗಾಗಿ ಗೋಪಾಲ್ ಮತ್ತು ಅವರ ಮಗ ಗಗನ್ ಮೃತರ ಅಂತ್ಯಕ್ರಿಯೆಗಾಗಿ ಅಲ್ಲಿಗೆ ಹೋಗಿದ್ದರು. ಐಶ್ವರ್ಯ, ನೆಲ ಅಂತಸ್ತಿನಲ್ಲಿರುವ ದೊಡ್ಡಮ್ಮನ ಮನೆಗೆ ಹೋಗಿದ್ದಳು. ಹೀಗಾಗಿ ಭಾರತಿ ಒಬ್ಬರೇ ಮನೆಯಲ್ಲಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ನುಗ್ಗಿದ ದುಷ್ಕರ್ಮಿ, ಅವರ ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಆಭರಣ ದೋಚಿ ಪರಾರಿಯಾಗಿದ್ದಾನೆ. ಐಶ್ವರ್ಯ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಭಾರತಿ ಸೇರಿದಂತೆ ಕುಟುಂಬ ಸದಸ್ಯರೆಲ್ಲಾ ಮಧ್ಯಾಹ್ನ ಮಲ್ಲೇಶ್ವರಕ್ಕೆ ಶಾಪಿಂಗ್ ಹೋಗಲು ನಿರ್ಧರಿಸಿದ್ದೆವು. ಹೀಗಾಗಿ ಭಾರತಿಯನ್ನು ಕರೆದುಕೊಂಡು ಬರುವಂತೆ ಐಶ್ವರ್ಯಳನ್ನು ಮನೆಗೆ ಕಳುಹಿಸಿದ್ದೆ. ಮನೆಗೆ ಹೋದ ಕೂಡಲೇ ಐಶ್ವರ್ಯ ಜೋರಾಗಿ ಚೀರಿಕೊಂಡಳು. ಆಕೆಯ ಚೀರಾಟ ಕೇಳಿ ತಂಗಿಯ ಮನೆಗೆ ಹೋದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕೂಡಲೇ ಭಾರತಿಯನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಕೆ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು' ಎಂದು ಪುಷ್ಪಾ ತಿಳಿಸಿದರು. 

`ಗೋಪಾಲ್ ಅವರು 25 ದಿನಗಳ ಹಿಂದೆ ಅನಂತು ಎಂಬಾತನಿಗೆ ಕೊಠಡಿಯೊಂದನ್ನು ಬಾಡಿಗೆ ಕೊಟ್ಟಿದ್ದರು. ಈ ವೇಳೆ ಆತನಿಂದ ಮುಂಗಡ ಹಣವೆಂದು ರೂ6,000 ಪಡೆದಿದ್ದರು. ಆದರೆ, ಬೇರೆ ಮನೆ ಮಾಡುವುದಾಗಿ ಮೂರು ದಿನಗಳ ಹಿಂದೆ ಮನೆ ಖಾಲಿ ಮಾಡಿದ್ದ ಅನಂತು, ಮುಂಗಡ ಹಣ ವಾಪಸ್ ನೀಡುವಂತೆ 3 ದಿನಗಳಿಂದ ಮಾಲೀಕರೊಂದಿಗೆ ಜಗಳವಾಡಿದ್ದ. ಇದೇ ಹಿನ್ನೆಲೆಯಲ್ಲಿ ಆತ ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚಿರಬಹುದು' ಎಂದು ಉತ್ತರ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಶಂಕೆ ವ್ಯಕ್ತಪಡಿಸಿದ್ದಾರೆ.

`ಬಾಡಿಗೆದಾರ ಅನಂತು ಪ್ರತಿದಿನ ತಂಗಿಯ ಮನೆ ಬಳಿ ಬಂದು ಜಗಳ ಮಾಡುತ್ತಿದ್ದ. ಅಲ್ಲದೇ, ಶನಿವಾರ ಬೆಳಿಗ್ಗೆಯಿಂದ ಇದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ. ಆತನೇ ಕೊಲೆ ಮಾಡಿ ಚಿನ್ನದ ಸರ ಮತ್ತು ಎರಡು ಓಲೆಗಳನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಭಾರತಿ ಅವರ ಅಕ್ಕ ಪುಷ್ಪಾ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ, ಘಟನಾ ಸ್ಥಳದಲ್ಲಿ ದೊರೆತ ಸುಳಿವುಗಳು ಸಹ ಬಾಡಿಗೆದಾರನೇ ಮೇಲಿನ ಶಂಕೆಯನ್ನು ಬಲಪಡಿಸಿವೆ. ಸದ್ಯ ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ' ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಸ್.ಮುರುಗನ್ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.