ಬೆಂಗಳೂರು (ಪಿಟಿಐ): ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್. ಧರ್ಮ ಸಿಂಗ್, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಹಾಗೂ ಇನ್ನಿತರರ ಮೇಲೆ ಲೋಕಾಯುಕ್ತ ನ್ಯಾಯಾಲಯವು ಸೋಮವಾರ ತನಿಖೆಗೆ ಆದೇಶಿಸಿದೆ.
ಇವರೊಂದಿಗೆ ದೇವೇಗೌಡ ಅವರ ಪುತ್ರ ಎಚ್.ಡಿ.ಬಾಲಕೃಷ್ಣ ಅವರ ಪತ್ನಿ ಕವಿತಾ ಬಾಲಕೃಷ್ಣ ಹಾಗೂ ಇತರ ಹತ್ತು ಮಂದಿ ಭೂಮಾಲಿಕರ ವಿರುದ್ಧ ಖಾಸಗಿ ದೂರು ದಾಖಲಾಗಿದೆ. ಇವರು ಸ್ವಂತ ಲಾಭಕ್ಕಾಗಿ ಸರ್ಕಾರಿ ಭೂಮಿಯನ್ನು ಅಕ್ರಮ ಡಿನೋಟಿಫಿಕೇಷನ್ ಮಾಡಿರುವ ಕುರಿತು ದೂರಲಾಗಿದೆ.
ಖಾಸಗಿ ದೂರು ದಾಖಲಿಸಿರುವ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿ ರವಿ ಕುಮಾರ್ ಅವರ ದೂರನ್ನು ಪುರಸ್ಕರಿಸಿರುವ ಲೋಕಾಯುಕ್ತ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಮೇ 21ರೊಳಗಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಅವರಿಗೆ ಸೂಚನೆ ನೀಡಿದ್ದಾರೆ.
ದೂರಿನಲ್ಲಿ ಕಾಂಗ್ರೆಸ್ ಸಂಸದ ಧರ್ಮ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2005ರ ಅಕ್ಟೋಬರ್ 5ರಂದು ಬೆಂಗಳೂರು ಉತ್ತರ ತಾಲ್ಲೂಕಿನ ಉತ್ತರಹಳ್ಳಿಯಲ್ಲಿ 10 ಎಕರೆ 17 ಗುಂಟೆ ಭೂಮಿಯನ್ನು ಬನಶಂಕರಿ 6ನೇ ಹಂತದ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಮಂಜೂರು ಮಾಡಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಹತ್ತು ಎಕರೆ 17 ಗುಂಟೆ ಭೂಮಿಯಲ್ಲಿ ಎರಡು ಎಕರೆ 20 ಗುಂಟೆಯನ್ನು ಕವಿತಾ ಎಂಬುವವರಿಗೆ 50 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇದರ ಅನ್ವಯ 2005ರ ಡಿಸೆಂಬರ್ 9ರಂದು ಕ್ರಯ ಪತ್ರಕ್ಕೆ ಸಹಿ ಹಾಕಲಾಗಿದೆ . 2006ರ ಆಗಸ್ಟ್ 1ರಂದು ಕವಿತಾ ಅವರು ತಾವು ಖರೀದಿಸಿದ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಶೋಭಾ ಡೆವಲಪರ್ಸ್ ಅವರಿಗೆ ಮಾರಿದ್ದಾರೆ. ಅದೇ ದಿನ ಉಳಿದ ಭೂಮಿಯನ್ನೂ ಶೋಭಾ ಡೆವಲಪರ್ಸ್ ಅವರಿಗೆ ಭೂಮಾಲಿಕರು ಭಾರಿ ಮೊತ್ತಕ್ಕೆ ಮಾರಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.