ADVERTISEMENT

‘ಮಾಡದ ಕೆಲಸಕ್ಕೆ ಜಾಹೀರಾತಿನ ವೈಭವೀಕರಣ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:34 IST
Last Updated 3 ಅಕ್ಟೋಬರ್ 2017, 19:34 IST
‘ಮಾಡದ ಕೆಲಸಕ್ಕೆ ಜಾಹೀರಾತಿನ ವೈಭವೀಕರಣ’
‘ಮಾಡದ ಕೆಲಸಕ್ಕೆ ಜಾಹೀರಾತಿನ ವೈಭವೀಕರಣ’   

ಬೆಂಗಳೂರು: ‘ಯಾವುದೇ ಅಭಿವೃದ್ಧಿ ಕೆಲಸ ಮಾಡದ ಸಿದ್ದರಾಮಯ್ಯ ಸರ್ಕಾರ ಜಾಹೀರಾತುಗಳ ಮೂಲಕ ವಿಜೃಂಭಿಸುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಫಲಾನುಭವಿಗಳಿಗೆ ಸವಲತ್ತು ತಲುಪುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಅನ್ನು ಟೀಕಿಸುತ್ತಿದ್ದ ಮುಖ್ಯಮಂತ್ರಿ ಇದೀಗ ಅವರನ್ನು ಅನುಕರಿಸಲು ಹೊರಟಿದ್ದಾರೆ. ಯಾವುದೇ ಸಾಧನೆ ಇಲ್ಲದಿದ್ದರೂ ಕಾಮ್ ಕೀ ಬಾತ್ ಮಾಡಲು ಮುಂದಾಗಿದ್ದಾರೆ. ‌ಜನರ ಮನಸ್ಸು ಬೇರೆ ಕಡೆ ಸೆಳೆಯುವ ತಂತ್ರ ಇದು’ ಎಂದು ದೂರಿದರು.

ಬುದ್ದಿಜೀವಿಗಳ ವಿರುದ್ಧ ಕಿಡಿ: ‘ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್‌ ಹತ್ಯೆ ಆರೋಪಿಗಳನ್ನು ಇನ್ನೂ ಪತ್ತೆ ಮಾಡಲು ಸರ್ಕಾರಕ್ಕೆ ಸಾಧ್ಯ ಆಗಿಲ್ಲ. ಆದರೆ, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿಲ್ಲ, ಬದಲು ನರೇಂದ್ರ ಮೋದಿ ವಿರುದ್ಧ ಮಾತಾಡುತ್ತಿದ್ದಾರೆ’ ಎಂದು ಶೆಟ್ಟರ್‌ ಟೀಕಿಸಿದರು.

ADVERTISEMENT

‘ಭ್ರಷ್ಟಾಚಾರದ ವಾಸನೆ’

‘ಉಚಿತ ಆರೋಗ್ಯ ಯೋಜನೆ ಹೆಸರಿನಲ್ಲಿ ಎಲ್ಲರಿಗೂ ಹೆಲ್ತ್‌ ಕಾರ್ಡ್ ನೀಡಲು ಹೊರಟಿರುವ ‌ಸರ್ಕಾರ, ಆ ಹೆಸರಿನಲ್ಲೂ ದುಡ್ಡು ಹೊಡೆಯುವ ಸಾಧ್ಯತೆ ಇದೆ’ ಎಂದು ಶೆಟ್ಟರ್‌ ಶಂಕೆ ವ್ಯಕ್ತಪಡಿಸಿದರು.

‘ಪ್ರತ್ಯೇಕ ಕಾರ್ಡ್‌ಗೆ ತರಾತುರಿಯಲ್ಲಿ ಟೆಂಡರ್‌ ನೀಡಲು ಮುಂದಾಗಿರುವುದನ್ನು ನೋಡಿದರೆ ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಪ್ರತಿಯೊಬ್ಬರ ಮಾಹಿತಿ ಸಂಗ್ರಹಕ್ಕೆ ₹ 30 ಸಂಗ್ರಹಿಸಿದರೆ ಕೋಟ್ಯಂತರ ಹಣ ಸಂಗ್ರಹವಾಗುತ್ತದೆ. ಸಚಿವ ರಮೇಶ್ ಕುಮಾರ್ ತಕ್ಷಣ ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕು’ ಎಂದು‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.