ಬೆಂಗಳೂರು: ಮಾದಕ ದ್ರವ್ಯದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, ಆರೋಪಿಯಿಂದ 25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ಉಡುಪಿಯ ಸುರೇಶ್ ಪೂಜಾರಿ ಗೋಲ್ಡನ್ ಸುರೇಶ್ (32) ಬಂಧಿತ ಆರೋಪಿ. ಸೋಮವಾರ (ಮಾ.5) ಕಾಟನ್‌ಪೇಟೆ ಮುಖ್ಯರಸ್ತೆ ಬದಿ ಕಾರಿನಲ್ಲಿ ಮಾದಕ ದ್ರವ್ಯದ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪಾಲದಿಂದ ಕೊಕೈನ್ ಖರೀದಿಸಿ ತಂದು ನಗರದ ಪರಿಚಿತ ಗ್ರಾಹಕರಿಗೆ ಸ್ಯಾಂಪಲ್ ಕೊಡುತ್ತಿದ್ದ. ನಂತರ ಅಡುಗೆಗೆ ಬಳಸುವ ಅಡುಗೆ ಸೋಡಾವನ್ನು ಕೊಕೈನ್ ಎಂದು ನಂಬಿಸಿ ಮಾರಾಟ ಮಾಡಿ ಗ್ರಾಹಕರಿಂದ ಹಣ ಪಡೆದು ವಂಚಿಸುತ್ತಿದ್ದ. ಈ ರೀತಿ ಸಂಪಾದಿಸಿದ ಹಣದಲ್ಲಿ ಕಾರು, ದುಬಾರಿ ಮೊಬೈಲ್‌ಗಳು ಮತ್ತು ಚಿನ್ನಾಭರಣಗಳನ್ನು ಖರೀದಿಸಿ ಐಶಾರಾಮಿಯಾಗಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯಿಂದ 10 ಗ್ರಾಂ ಕೊಕೈನ್, 850 ಗ್ರಾಂ ಚಿನ್ನಾಭರಣ, ಒಂದು ಕಾರು, ಮೂರು ಸಾವಿರ ರೂಪಾಯಿ ನಗದು, 2 ಮೊಬೈಲ್, ಬ್ಯಾಂಕ್ ಕಾರ್ಡ್‌ಗಳು ಸೇರಿದಂತೆ 25 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವಿರುದ್ಧ ಉಡುಪಿ, ಕುಂದಾಪುರ ಹಾಗೂ ಕೋಟಾ ಪೊಲೀಸ್ ಠಾಣೆಗಳಲ್ಲಿ ಒಂದು ದೊಂಬಿ ಪ್ರಕರಣ, ಎಂಟು ಪ್ರಾಣ ಬೆದರಿಕೆ, ಮೂರು ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಡ್ಡಗಟ್ಟಿ ದರೋಡೆ
ಟಾಟಾ ಸುಮೋದಲ್ಲಿ ಬಂದ ಮೂರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ಸೋಮವಾರ ರಾತ್ರಿ ಮಹದೇವಪುರ ಬಳಿ ಹೂಡಿ ವೃತ್ತ ಸಮೀಪ ನಡೆದಿದೆ.
ಹೂಡಿಗಾರ್ಡನ್ ನಿವಾಸಿ ಅಭಿಷೇಕ್ ಸಿಂಗ್ ದರೋಡೆಗೊಳಗಾದವರು. ರಾತ್ರಿ 10.30ಕ್ಕೆ ಹೊಟೇಲ್‌ನಲ್ಲಿ ಊಟ ಮಾಡಿ ಮನೆಗೆ ಹಿಂತಿರುಗುವಾಗ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಭಿಷೇಕ್‌ರಿಂದ ಮೂರು ಗ್ರಾಂ ಚಿನ್ನದ ಸರ, ಒಂದು ಮೊಬೈಲ್ ಹಾಗೂ ಮೂರು ಸಾವಿರ ನಗದು ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.