ADVERTISEMENT

ಮಾಧ್ಯಮಗಳಿಗೆ ಹ್ಯಾರಿಸ್‌ ಪಾಠ!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 20:03 IST
Last Updated 1 ಮಾರ್ಚ್ 2018, 20:03 IST
‘ಭಯಮುಕ್ತ ಬೆಂಗಳೂರು’ ಅಭಿಯಾನಕ್ಕೆ ಚಾಲನೆ
‘ಭಯಮುಕ್ತ ಬೆಂಗಳೂರು’ ಅಭಿಯಾನಕ್ಕೆ ಚಾಲನೆ   

ಬೆಂಗಳೂರು: ‘ಮಾಧ್ಯಮ ಮಿತ್ರರು ನನ್ನ ಜತೆಗೆ 24 ತಾಸು ಇರುತ್ತಾರೆ. ಅವರ ಸಹಕಾರದಿಂದಲೇ ಕ್ಷೇತ್ರದಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ. ಆದರೆ, ಮಾಧ್ಯಮಗಳು ಒಳ್ಳೆಯದನ್ನೂ ಬರೆಯಲು ಗಮನ ಕೊಡಬೇಕು’ ಎಂದು ಶಾಸಕ ಎನ್‌.ಎ.ಹ್ಯಾರಿಸ್‌ ಮಾಧ್ಯಮಗಳಿಗೆ ಪಾಠ ಮಾಡಿದರು.

ಚರ್ಚ್‌ ಸ್ಟ್ರೀಟ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಯಾರೂ ಕೂಡ ಮನಸು ನೋಯಿಸುವಂತಹ ರಾಜಕಾರಣ ಮಾಡಬಾರದು. ಎಲ್ಲರಿಗೂ ಮನುಷ್ಯರಾಗಿ ಬದುಕುವ ವಾತಾವರಣ ನಿರ್ಮಿಸಿಕೊಡಬೇಕು. ಸರಿ ತಪ್ಪು ನಿರ್ಧರಿಸಲು ಭಗವಂತನೊಬ್ಬ ಇದ್ದಾನೆ. ಆದರೆ, ತಪ್ಪನ್ನು ಯಾರೇ ಮಾಡಿದರೂ ಅದೂ ತಪ್ಪೇ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು’ ಎಂದು ತಮ್ಮ ಪುತ್ರ ಮೊಹಮದ್‌ ನಲಪಾಡ್‌ ಪ್ರಕರಣ ನೇರವಾಗಿ ಪ್ರಸ್ತಾಪಿಸದೇ ಹೇಳಿ‌ದರು.

ADVERTISEMENT

‘ಬಿಜೆಪಿ ಮುಖಂಡರಿಗೆ ತಾಕತ್ತು ಇದ್ದರೆ ಶಾಂತಿನಗರ ಕ್ಷೇತ್ರದಲ್ಲಿ 5 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.

ಕೈಯಲ್ಲಿ ಬಾವುಟ ಹಿಡಿದು ಚರ್ಚ್‌ ಸ್ಟ್ರೀಟ್‌ನಲ್ಲಿ ಜಮಾಯಿಸಿದ್ದ ಹ್ಯಾರಿಸ್‌ ಬೆಂಬಲಿಗರು, ಮುಖ್ಯಮಂತ್ರಿಗೆ ಹಾಗೂ ಹ್ಯಾರಿಸ್‌ಗೆ ಜೈಕಾರ ಕೂಗಿದರು.

‘ಭಯಮುಕ್ತ ಬೆಂಗಳೂರು’ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಎನ್‌.ಎಸ್‌. ರೆಡ್ಡಿ ಅವರು ‘ಭಯಮುಕ್ತ ಬೆಂಗಳೂರು’ ಅಭಿಯಾನ ಪ್ರಾರಂಭಿಸಿದ್ದಾರೆ.

‘ಶಾಸಕರ ಪುತ್ರನಿಂದಲೇ ನಡೆದಿರುವ ಹಲ್ಲೆ ಪ್ರಕರಣದಿಂದ ನಗರದ ಗೌರವಕ್ಕೆ ಧಕ್ಕೆ ಉಂಟಾಗಿದೆ. ಭೀತಿಯ ವಾತಾವರಣ ನಿರ್ಮಾಣವಾಗಿದೆ' ಎಂದು ರೆಡ್ಡಿ ತಿಳಿಸಿದರು.

'ವಿದ್ವತ್ ಮೇಲೆ ಹಲ್ಲೆ ನಡೆದಾಗ ಮತ್ತು ನಂತರ ಫರ್ಜಿ ಕೆಫೆಯ ಆಡಳಿತ ಮಂಡಳಿ ಮೌನ ವಹಿಸಿತ್ತು. ಪಬ್‌ನಲ್ಲಿ ಬೌನ್ಸರ್‌ಗಳು ಸುಮ್ಮನಿದ್ದರು. ಯುಬಿ ಸಿಟಿಯಲ್ಲಿನ 50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸುಮ್ಮನೆ ಘಟನೆ ವೀಕ್ಷಿಸಿದ್ದರು... ಹೀಗೆ ಅಪರಾಧ ಕೃತ್ಯ ನಡೆದಾಗ ಸುತ್ತಲಿನ ಸಮಾಜ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವ ಪರಿಪಾಠ ಹೆಚ್ಚಾಗಿದೆ. ಜನರ ಮನೋಭಾವ ಬದಲಿಸುವುದು ಹಾಗೂ ಅವರ ಪಾತ್ರವನ್ನು ತಿಳಿಸುವುದು ಈ ಅಭಿಯಾನದ ಉದ್ದೇಶ’ ಎಂದರು.

ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಪ್ರಕರಣಗಳು ನಡೆದಾಗ ಮಾಹಿತಿ ನೀಡಬಹುದು. ಜೊತೆಗೆ ಇಂತಹ ಪ್ರಕರಣಗಳಲ್ಲಿ ಪೊಲೀಸರು ಯಾವ ರೀತಿ ವರ್ತಿಸುತ್ತಾರೆ, ತಾರತಮ್ಯ ಮಾಡುತ್ತಿದ್ದಾರೆಯೇ ಎಂಬ ಬಗ್ಗೆಯೂ ತಿಳಿಸಬಹುದು. ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದಾಗಲೇ ವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ತಿಳಿಸಿದರು.

9019551122 ಸಂಖ್ಯೆಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.