ADVERTISEMENT

‘ಮಾಧ್ಯಮಗಳ ವಿಶ್ಲೇಷಣೆಯಿಂದ ದೇಶದ ಸ್ವಾಸ್ಥ್ಯ ಹಾಳು’

ಸರ್ವಜ್ಞನಗರದಲ್ಲಿ ಈದ್‌–ಮಿಲನ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 20:11 IST
Last Updated 4 ಜುಲೈ 2017, 20:11 IST
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ಜೆಡಿಎಸ್‌ ನಾಯಕ ಅನ್ವರ್‌ ಷರೀಫ್‌ (ಬಲಬದಿ) ಮಾತನಾಡಿದರು. ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ಜೆಡಿಎಸ್‌ ನಾಯಕ ಅನ್ವರ್‌ ಷರೀಫ್‌ (ಬಲಬದಿ) ಮಾತನಾಡಿದರು. ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿರುವುದರಿಂದ ಪಾಕಿಸ್ತಾನದ ಜಂಘಾಬಲ ಉಡುಗಿಹೋಗಿದೆ ಎಂದು ಇಂಗ್ಲಿಷ್‌ ವಾಹಿನಿಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಮಾಧ್ಯಮಗಳ ಇಂತಹ ವಿಶ್ಲೇಷಣೆಗಳಿಂದಲೇ ದೇಶದ ಸ್ವಾಸ್ಥ್ಯ ಹಾಳಾಗಬಹುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಈದ್‌–ಮಿಲನ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾಧ್ಯಮಗಳು ಅನಗತ್ಯವಾಗಿ ಪಾಕಿಸ್ತಾನದ ವಿಷಯ ತರುತ್ತಿವೆ. ನಮಗೆ ಯುದ್ಧ ಬೇಕಿಲ್ಲ. ಸಾವಿರಾರು ಯೋಧರ ಬಲಿ ತೆಗೆದುಕೊಳ್ಳಬೇಕಿಲ್ಲ’ ಎಂದರು.

‘ಜಮ್ಮು–ಕಾಶ್ಮೀರದಲ್ಲಿ ಬಂದೂಕು ತೋರಿಸಿ ಶಾಂತಿ ಸ್ಥಾಪಿಸುತ್ತೇವೆ ಎಂದು ಹೋಗುತ್ತಿದ್ದಾರೆ. ಆದರೆ, ಅಲ್ಲಿನ ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ ಚುನಾವಣೆಯಲ್ಲಿ ಶೇ 2ರಷ್ಟು ಮತದಾನ ನಡೆದಿದೆ. ಇಂತಹ ವ್ಯವಸ್ಥೆಯಲ್ಲಿ ನಾವಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ‘ಬಾಬರಿ ಮಸೀದಿಯನ್ನು ಬಿಜೆಪಿಯವರು ಕೆಡವಿದರೆ, ಅದಕ್ಕೆ ಕಾಂಗ್ರೆಸ್‌ನವರು ಸಹಕಾರ ನೀಡಿದ್ದರು. ಇದರ ಪರಿಣಾಮ ದುಶ್ಮನ್‌ ದೇಶ ಪಾಕಿಸ್ತಾನದಿಂದ ಭಯೋತ್ಪಾದಕರು ಭಾರತಕ್ಕೆ ಬಂದರು. ಅದಕ್ಕೆ ಅವಕಾಶ ನೀಡಿದ್ದು, ಸಹಕರಿಸಿದ್ದು ಯಾರು? ದೇಶದಲ್ಲಿರುವ ಮುಸ್ಲಿಮರು ಭಯೋತ್ಪಾದಕರಲ್ಲ; ಭಾರತೀಯರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.