ADVERTISEMENT

ಮಾನವೀಯ ಗುಣ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST
ನಗರದ ಪುರಭವನದಲ್ಲಿ ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಹಾಗೂ ದೇವಾಂಗ ಸಮಾಜ ವಿಚಾರ ವೇದಿಕೆಯಿಂದ ಸಂಯುಕ್ತವಾಗಿ ಭಾನುವಾರ ಹಮ್ಮಿಕೊಂಡಿದ್ದ `ಪ್ರತಿಭಾ ಪುರಸ್ಕಾರ- 2013' ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಹಾಗೂ ಕರ್ನಾಟಕ ಗೃಹ ಮಂಡಳಿ ಆಯುಕ್ತ ಎಸ್.ಎನ್.ಜಯರಾಮ್ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು 	-ಪ್ರಜಾವಾಣಿ ಚಿತ್ರ
ನಗರದ ಪುರಭವನದಲ್ಲಿ ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಹಾಗೂ ದೇವಾಂಗ ಸಮಾಜ ವಿಚಾರ ವೇದಿಕೆಯಿಂದ ಸಂಯುಕ್ತವಾಗಿ ಭಾನುವಾರ ಹಮ್ಮಿಕೊಂಡಿದ್ದ `ಪ್ರತಿಭಾ ಪುರಸ್ಕಾರ- 2013' ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಹಾಗೂ ಕರ್ನಾಟಕ ಗೃಹ ಮಂಡಳಿ ಆಯುಕ್ತ ಎಸ್.ಎನ್.ಜಯರಾಮ್ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಹಿಂದುಳಿದ ವರ್ಗಗಳ ಅಭಿವೃದ್ಧಿ ಬಗ್ಗೆ ತೋರಿಕೆಗಾಗಿ ಭಾಷಣ ಮಾಡುವವರಿಗಿಂತ ಪಣತೊಟ್ಟು ಶ್ರಮಿಸುವವರ ಅಗತ್ಯವಿದೆ' ಎಂದು ಕರ್ನಾಟಕ ಗೃಹ ಮಂಡಳಿ ಆಯುಕ್ತ ಎಸ್.ಎನ್.ಜಯರಾಮ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಹಾಗೂ ದೇವಾಂಗ ಸಮಾಜ ವಿಚಾರ ವೇದಿಕೆಯಿಂದ ಸಂಯುಕ್ತವಾಗಿ ಭಾನುವಾರ ಹಮ್ಮಿಕೊಂಡಿದ್ದ `ಪ್ರತಿಭಾ ಪುರಸ್ಕಾರ- 2013' ಕಾರ್ಯಕ್ರಮದಲ್ಲಿ ಮಾತನಾಡಿದರು.

`ರಾಜಕಾರಣಿಗಳು ಮತ್ತು ಅಧಿಕಾರಿಗಳು ಅಧಿಕಾರದಲ್ಲಿ ಇಲ್ಲದಿರುವಾಗ ಹಿಂದುಳಿದ ಸಮುದಾಯಗಳ ಬಗ್ಗೆ ಕರುಣಾಜನಕವಾಗಿ ಮಾತನಾಡುತ್ತಾರೆ. ಆದರೆ ಅಧಿಕಾರದಲ್ಲಿ ಕೂತ ತಕ್ಷಣ ಮೇಲ್ವರ್ಗದವರಾಗಿ ಬದಲಾಗುತ್ತಾರೆ. ಇದು ಸರಿಯಲ್ಲ. ಜಾತಿ, ವರ್ಗಗಳನ್ನು ಮೀರಿ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು' ಎಂದರು.

`ಜಾತಿಗೊಂದು ಮಠ, ಸ್ವಾಮೀಜಿಯನ್ನು ನೇಮಕ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಅಂತೆಯೇ ಸಮಾವೇಶಗಳು. ಇದರ ಅಗತ್ಯ ಇದೆಯೇ ಇಲ್ಲವೇ ಎಂಬ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕು. ಜಾತಿ, ವರ್ಣ, ವರ್ಗಗಳನ್ನು ಮೀರಿ ಮಾನವೀಯ ಗುಣವನ್ನು ರೂಢಿಸಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, `ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಎಲ್ಲರೂ ಇದರ ಸೌಲಭ್ಯ ಪಡೆದುಕೊಳ್ಳಬೇಕು' ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, `ನೇಕಾರ ಸಮುದಾಯಗಳು ವಿವಿಧ ಜಾತಿ ಉಪಜಾತಿಗಳಲ್ಲಿ ಚದುರಿ ಹೋಗಿದ್ದು, ಒಂದುಗೂಡುವ ಅಗತ್ಯವಿದೆ. ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ದುಡಿಮೆಯಲ್ಲಿ ಒಂದಷ್ಟನ್ನು ಇಂತಹ ಕಾರ್ಯಕ್ರಮಗಳಿಗಾಗಿ ಮೀಸಲಿಡುತ್ತಿರುವ ದೇವಾಂಗ ನೌಕರರ ಸಂಘದ ಸೇವೆ ಶ್ಲಾಘನೀಯ' ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ 150 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನೌಕರರ ಸಂಘದ ಅಧ್ಯಕ್ಷ ಕೆ.ಆರ್.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್, ಬೆಂಗಳೂರು ದೇವಾಂಗ ಸಂಘದ ಅಧ್ಯಕ್ಷ ಸ.ಸೂರ್ಯನಾರಾಯಣ, ದೇವಾಂಗ ಸಮಾಜ ವಿಚಾರ ವೇದಿಕೆ ಅಧ್ಯಕ್ಷ ಕೆ.ಎಲ್.ಅನಂತಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.