ADVERTISEMENT

ಮಾರಕಾಸ್ತ್ರಗಳಿಂದ ರೌಡಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಬೆಂಗಳೂರು: ರೌಡಿ ಮಂಜುನಾಥ್ ಅಲಿಯಾಸ್ ಕಡ್ಲೆಕಾಯಿ ಮಂಜ (30) ಎಂಬಾತನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಗಾಂಧಿಬಜಾರ್‌ನಲ್ಲಿ ಸೋಮವಾರ ನಡೆದಿದೆ.

ಹನುಮಂತನಗರ ಸಮೀಪದ ಲಕ್ಷ್ಮಿಪುರ ನಿವಾಸಿಯಾದ ಮಂಜುನಾಥ್ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ. ಆತ ಸೀನ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಲ್ಲದೇ ಕೆಂಪೇಗೌಡನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜುನಾಥ್ ಗಾಂಧಿಬಜಾರ್‌ನ ಸಣ್ಣಪುಟ್ಟ ವ್ಯಾಪಾರಿಗಳಿಗೆ ಸಾಲ ಕೊಟ್ಟಿದ್ದ. ಈ ಹಿನ್ನೆಲೆಯಲ್ಲಿ ಆತ ಪ್ರತಿನಿತ್ಯ ಗಾಂಧಿಬಜಾರ್‌ಗೆ ಬಂದು ಸಾಲ ವಸೂಲಿ ಮಾಡುತ್ತಿದ್ದ. ಅಂತೆಯೇ ಬೆಳಿಗ್ಗೆ 8 ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಗಾಂಧಿಬಜಾರ್‌ಗೆ ಬಂದಿದ್ದ ಆತ ಉತ್ತರ ಆಂಜನೇಯ ದೇವಸ್ಥಾನ ರಸ್ತೆಯ ಹೋಟೆಲ್‌ವೊಂದರ ಬಳಿ ನಿಂತಿದ್ದ.
ಅದೇ ವೇಳೆಗೆ ಅಲ್ಲಿಗೆ ಕಾರಿನಲ್ಲಿ ಬಂದ ಏಳೆಂಟು ಮಂದಿ ದುಷ್ಕರ್ಮಿಗಳು ಆತನ ಮೇಲೆ ಏಕಾಏಕಿ ದಾಳಿ ಮಾಡಿ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆತನ ಎಡಗೈ, ಬೆನ್ನು ಮತ್ತು ಕತ್ತಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಮಂಜುನಾಥ್‌ನ ಸ್ನೇಹಿತರೇ ಹಣಕಾಸು ವ್ಯವಹಾರದಲ್ಲಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸವನಗುಡಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ಬಂಧನ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ದೇವರಜೀವನಹಳ್ಳಿಯ ಮೋದಿ ಗಾರ್ಡನ್‌ನ ಆಸಿಫ್ ಬಾಷಾ (21) ಎಂಬಾತನನ್ನು ಬಂಧಿಸಿ      ಆರೋಪಿಯಿಂದ 644 ಗ್ರಾಂ ಗಾಂಜಾ, ದ್ವಿಚಕ್ರ ವಾಹನ ಮತ್ತು ಮೊಬೈಲ್‌ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಕಾಡುಗೊಂಡನಹಳ್ಳಿ ಪೊಲೀಸರು ಹೇಳಿದ್ದಾರೆ.

ಆತ ಕಾರಾಗೃಹದಲ್ಲಿರುವ ಕೈದಿಗಳಾದ ನಾಜಿಮ್, ಪಸ್ಸಿ ಮತ್ತು ಇಮ್ರೋನ್ ಎಂಬುವರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ. ಸಿಟಿ ಮಾರುಕಟ್ಟೆ ಬಳಿ ಮೌಲಾ ಎಂಬಾತನಿಂದ ಗಾಂಜಾ ಖರೀದಿಸಿದ್ದ ಆತ ಅದನ್ನು ಹೊಸ ಚಪ್ಪಲಿಗಳ ಸೋಲ್‌ನ ಒಳ ಭಾಗದಲ್ಲಿ ಅಡಗಿಸಿಟ್ಟಿದ್ದ. ಆ ಮೂವರು ಕೈದಿಗಳಿಗೆ ಹೊಸ ಚಪ್ಪಲಿ ನೀಡುವ ಸೋಗಿನಲ್ಲಿ ಜೈಲಿಗೆ ಹೋಗಿ ಗಾಂಜಾ ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಟಿ.ಜಿ.ಕೃಷ್ಣಭಟ್, ಕೆ.ಆರ್.ಪುರ ಉಪ ವಿಭಾಗದ ಎಸಿಪಿ ಡಾ.ಡಿ.ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎನ್.ಎಚ್.ಸಿದ್ದಪ್ಪ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.
ಸರಗಳವು: ದುಷ್ಕರ್ಮಿಗಳು ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಸಹಕಾರನಗರದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಸಹಕಾರನಗರ `ಎ~ ಬ್ಲಾಕ್‌ನ ಏಳನೇ ಮುಖ್ಯರಸ್ತೆ ನಿವಾಸಿ ಬಿ.ಕೆ.ಮಯೂರ ಸರ ಕಳೆದುಕೊಂಡವರು. ಅವರು ಮನೆಯ ಸಮೀಪದ ಕಸದ ತೊಟ್ಟಿಗೆ ಕಸ ಸುರಿದು ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಸರದ ಮೌಲ್ಯ ಸುಮಾರು ಒಂದು ಲಕ್ಷ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಕೊಡಿಗೇಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.