ADVERTISEMENT

ಮಾರ್ಚ್ ವೇಳೆಗೆ ದೊರೆಯುವುದಿಲ್ಲ ಪೂರ್ಣ ಕಾವೇರಿ

ಡಿ.ಕೆ.ರಮೇಶ್
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಬೆಂಗಳೂರು: ಕಾವೇರಿ ನಾಲ್ಕನೇ ಹಂತ ಎರಡನೇ ಘಟ್ಟದ ನೀರು ಸರಬರಾಜು ಯೋಜನೆಯ ಕಾಮಗಾರಿ ಬರುವ ವರ್ಷದ ಮಾರ್ಚ್‌ನಲ್ಲಿ ಪೂರ್ಣವಾದರೂ, ನಿಗದಿತ 500 ದಶಲಕ್ಷ ಲೀಟರ್ ನೀರನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಮಹಾನಗರದ ಜನತೆ ಮತ್ತೆ ಆರು ತಿಂಗಳ ಕಾಲ ಕಾಯಬೇಕಾಗುತ್ತದೆ.

ನೀರಿನ ಪರಿಶುದ್ಧತೆಯ ಪರಿಶೀಲನೆ, ನೂತನ ಕೊಳವೆ ಮಾರ್ಗಗಳ ಶುದ್ಧೀಕರಣ, ಹಾಗೂ ನಗರ ಪ್ರದೇಶದಲ್ಲಿ ಪೂರ್ಣಗೊಳ್ಳಬೇಕಾದ ಕಾಮಗಾರಿಗಳಿಂದಾಗಿ ಹಂತ ಹಂತವಾಗಿ ನೀರನ್ನು ನಗರಕ್ಕೆ ಪೂರೈಸಲಾಗುತ್ತದೆ ಎಂದು ಬೆಂಗಳೂರು ಜಲಮಂಡಲಿಯ ಉನ್ನತ ಮೂಲಗಳು ತಿಳಿಸಿವೆ.

ಯೋಜನೆಯ ಪ್ರಕಾರ ಒಟ್ಟು ಐದು ಪಂಪ್‌ಗಳ ಮೂಲಕ ಶಿವ ಸಮತೋಲನ ಜಲಾಶಯದಿಂದ ನಗರಕ್ಕೆ ನೀರು ಹಾಯಿಸಲಾಗುತ್ತದೆ. ಇನ್ನು ಐದು ಪಂಪ್‌ಗಳನ್ನು ಪರ್ಯಾಯ ಕಾರ್ಯಕ್ಕೆ ಬಳಸಲಾಗುತ್ತದೆ. ಆದರೆ ಯೋಜನೆ ಅನುಷ್ಠಾನದ ಮೊದಲ ಕೆಲ ತಿಂಗಳು ನಗರಕ್ಕೆ ಹರಿದು ಬರುವುದು ಕೇವಲ 100 ದಶಲಕ್ಷ ಲೀಟರ್ ನೀರು ಮಾತ್ರ.

ಒಟ್ಟು 172 ಕಿ.ಮೀ ದೂರದಿಂದ ನಗರಕ್ಕೆ ನೀರು ತರಲಾಗುತ್ತಿದ್ದು ಇಡೀ ಕೊಳವೆಗಳನ್ನು ಸ್ವಚ್ಛಗೊಳಿಸಲು ಮೊದಲು ಆದ್ಯತೆ ನೀಡಲಾಗುತ್ತದೆ. ಕಾಮಗಾರಿ ತ್ಯಾಜ್ಯ, ಮಳೆ ನೀರಿನಿಂದ ಅಶುದ್ಧವಾಗಿರುವ ಕೊಳವೆಗಳನ್ನು ನೀರು ಹಾಯಿಸಿ ಶುಭ್ರಗೊಳಿಸಲಾಗುತ್ತದೆ. ಶಿವ ಜಲಾಶಯದಿಂದ ನೆಟ್‌ಕಲ್ ಸಮತೋಲನ ಜಲಾಶಯಕ್ಕೆ ಅಲ್ಲಿಂದ ತೊರೆಕಾಡನಹಳ್ಳಿಗೆ ನೀರು ಹಾಯುತ್ತದೆ. ಅಲ್ಲಿಂದ ಹಾರೋಹಳ್ಳಿ, ತಾತಗುಣಿ ಮೂಲಕ ಬೆಂಗಳೂರಿಗೆ ನೀರು ಸರಬರಾಜಾಗುತ್ತದೆ. ಈ ಎಲ್ಲಾ ಸ್ಥಳಗಳಲ್ಲಿ ಕೊಳವೆಗಳು ಜಲಸಂಗ್ರಹಾಗಾರಗಳನ್ನು ಶುದ್ಧಗೊಳಿಸಲಾಗುತ್ತದೆ. ಇದಕ್ಕೆ ಎರಡರಿಂದ ಮೂರು ತಿಂಗಳ ಕಾಲ ಹಿಡಿಯುತ್ತದೆ.

ಅಲ್ಲದೆ ಕೊಳವೆಯಲ್ಲಿ ಹರಿಯುವ ನೀರು ಕುಡಿಯಲು ಯೋಗ್ಯವೇ ಎಂಬ ಪರೀಕ್ಷೆ ನಡೆಯುತ್ತದೆ. ಕೊಳವೆಯಲ್ಲಿ ನೀರು ಹರಿಯಲು ಆರಂಭವಾದಾಗ ಶಿಲೀಂಧ್ರ, ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಲಾಗುತ್ತದೆ. ಪ್ರಯೋಗಾಲಯದ ತಜ್ಞರಿಂದ ಹಸಿರು ನಿಶಾನೆ ದೊರೆತರಷ್ಟೇ ನೂತನ ಕೊಳವೆ ಮಾರ್ಗದ ಮೂಲಕ ಕಾವೇರಿ ನಗರದ ನಲ್ಲಿಗಳಲ್ಲಿ ಹರಿಯಲಿದ್ದಾಳೆ.

ನಗರ ಹೊರವಲಯದ ಒಟ್ಟು ಏಳು ಪಟ್ಟಣ ಪಂಚಾಯ್ತಿ ಹಾಗೂ ಒಂದು ಪುರಸಭೆ ವ್ಯಾಪ್ತಿಯ ಹಳ್ಳಿಗಳಲ್ಲಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಹಾಗೂ ನಗರದ ಏಳು ಭಾಗಗಳಲ್ಲಿ ಜಲ ಸಂಗ್ರಹಾಗಾರಗಳ ನಿರ್ಮಾಣ ಕಾಮಗಾರಿ ವಿವಿಧ ಹಂತಗಳಲ್ಲಿದ್ದು ಯೋಜನೆ ಅನುಷ್ಠಾನಗೊಳ್ಳುವ ಹೊತ್ತಿಗೆ ಇವು ಪೂರ್ಣಗೊಳ್ಳಬೇಕಿದೆ.

ಈಗಾಗಲೇ ಕಾರ್ಮಿಕರ ಸಮಸ್ಯೆ, ಮರಳಿನ ಕೊರತೆ, ಕೃಷಿಕರ ವಿರೋಧ ಮುಂತಾದ ಅಡ್ಡಿ ಆತಂಕಗಳನ್ನು ಯೋಜನೆ ಎದುರಿಸಿದ್ದು ದುರ್ಗಮವಾದ ಅರಣ್ಯದಲ್ಲಿ 6.5 ಕಿ.ಮೀ ಉದ್ದದ ಕೊಳವೆ ಮಾರ್ಗ ಅಳವಡಿಸಬೇಕಿರುವುದರಿಂದ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕಾಮಗಾರಿ ಆರಂಭವಾದರೂ ಆರು ತಿಂಗಳ ಕಾಲ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆ ಸಾಧ್ಯವಿಲ್ಲದೆ ಇರುವುದರಿಂದ ಈ ಬಾರಿಯ ಬೇಸಿಗೆಯಲ್ಲಿಯೂ ನಗರದ ಜನತೆ ನೀರಿನ ಕೊರತೆ ಎದುರಿಸುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.