ADVERTISEMENT

ಮಾಸ್ಟರ್ ಪ್ಲಾನ್ ಪರಿಷ್ಕರಣೆ ಅಧಿಸೂಚನೆಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಬೆಂಗಳೂರು: ಬೆಂಗಳೂರು ಮಹಾನಗರದ 2015ರ `ಮಾಸ್ಟರ್ ಪ್ಲಾನ್~ ಪರಿಷ್ಕರಿಸುವ ಸಂಬಂಧ ಸಲಹೆ ಪಡೆಯಲು ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ 2012ರ ಮೇ 7ರಂದು ಹೊರಡಿಸಿರುವ ಅಧಿಸೂಚನೆಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

`ಅಧಿಸೂಚನೆ ಹೊರ ಬಿದ್ದು ಎರಡು ತಿಂಗಳಾಗುತ್ತಾ ಬಂದರೂ ಸಾರ್ವಜನಿಕರಿಂದ ಇದುವರೆಗೆ ಕೇವಲ 15ರಿಂದ 20 ಸಲಹೆಗಳಷ್ಟೇ ಬಂದಿವೆ~ ಎಂದು ಬಿಡಿಎ ನಗರ ಯೋಜನಾ ಸದಸ್ಯ ತಿರುಕನಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ನಗರದ ಭವಿಷ್ಯದ ಯೋಜನೆ ಎಂದೇ ಬಿಂಬಿಸಲಾಗುವ ಈ `ಮಾಸ್ಟರ್ ಪ್ಲಾನ್~ಗೆ ಸಾರ್ವಜನಿಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಲು ಜುಲೈ 7 ಕಡೇ ದಿನ. `ಮಾಸ್ಟರ್ ಪ್ಲಾನ್~ ಪರಿಷ್ಕರಣೆಗೆ ಸಂಬಂಧಿಸಿದಂತೆ ರೂಪುರೇಷೆಗಳನ್ನು ಸಿದ್ಧಪಡಿಸಲು ಬಿಡಿಎ ಒಂಬತ್ತು ಕಂಪೆನಿಗಳನ್ನು ಆಯ್ಕೆ ಮಾಡಿದ್ದು, ಪೂರ್ವ ಬಿಡ್ ಸಭೆ ಮುಕ್ತಾಯಗೊಂಡಿದೆ ಎಂದು ಅವರು ತಿಳಿಸಿದರು.

`ಮಾಸ್ಟರ್ ಪ್ಲಾನ್~ನ ಕರಡು ವರದಿ ಸಿದ್ಧಗೊಂಡ ನಂತರ ನಾವು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರುತ್ತೇವೆ. ಆಗ ಸಾರ್ವಜನಿಕರಿಂದ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ದೊರೆಯಬಹುದು ಎಂದು ನಾವು ನಿರೀಕ್ಷಿಸಿದ್ದೇವೆ~ ಎಂದು ಗೌಡ ವಿಶ್ವಾಸ ವ್ಯಕ್ತಪಡಿಸಿದರು.

2015ರ ಸಿಡಿಪಿ ಎಂದೇ ಕರೆಯಲಾಗುವ ಈ `ಮಾಸ್ಟರ್ ಪ್ಲಾನ್~ ಅನ್ನು ನಗರದ ಮುಂದಿನ 20 ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಷ್ಕರಿಸಲಾಗುತ್ತದೆ. ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ನು `ಸಿಡಿಪಿ-2035~ ಎಂದು ಕರೆಯಲಾಗುತ್ತದೆ.

ಸಾರ್ವಜನಿಕರು ಜುಲೈ 7ರವರೆಗೆ ತಮ್ಮ ಸಲಹೆ-ಸೂಚನೆಗಳನ್ನು  ಸಲ್ಲಿಸಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.