ADVERTISEMENT

ಮೀನು ಹಿಡಿಯಲು ಹೋಗಿ ಇಬ್ಬರ ಸಾವು

ಮದ್ಯದ ಅಮಲು ತಂದ ಆಪತ್ತು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 20:20 IST
Last Updated 6 ಸೆಪ್ಟೆಂಬರ್ 2013, 20:20 IST

ಯಲಹಂಕ: ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ ಐವರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟು ಮೂವರು ಪಾರಾಗಿರುವ ಘಟನೆ ಯಲಹಂಕ ಠಾಣೆ ವ್ಯಾಪ್ತಿಯ ಜಕ್ಕೂರು ಕೆರೆಯಲ್ಲಿ ಗುರುವಾರ ನಡೆದಿದೆ.

ಅಗ್ರಹಾರ ಲೇಔಟ್ ನಿವಾಸಿಗಳಾದ ರೌಡಿ ಶೀಟರ್ ವಾಲೆರಾಮ (28) ಹಾಗೂ ಅದೇ ಗ್ರಾಮದ ತೇಜಸ್ (17) ಮೃತಪಟ್ಟವರು. ಗುರುವಾರ ಮಧ್ಯಾಹ್ನ ಸುಮಾರು ಮೂರು ಗಂಟೆ ವೇಳೆ ಮದ್ಯ ಸೇವಿಸಿದ್ದ ವಾಲೆರಾಮ ಸೇರಿದಂತೆ ಏಳು ಮಂದಿ ಕೆರೆಯ ಬಳಿ ಮೀನು ಖರೀದಿಗೆ ಬಂದಿದ್ದಾರೆ. ಮೀನು ಹಿಡಿಯುವವರು ಮೀನು ಖಾಲಿಯಾಗಿದೆ ಎಂದು ಉತ್ತರಿಸಿದ್ದಾರೆ. ಚೇತನ್ ಮತ್ತು ಮಂಜುನಾಥ್ ಅವರನ್ನು ದಡದಲ್ಲಿ ನಿಲ್ಲಿಸಿ ವಾಲೆರಾಮ, ತೇಜಸ್, ಭರತ್ (20), ಶರತ್ (18) ಹಾಗೂ ಶ್ರೀಧರ್ (24) ಬಲವಂತವಾಗಿ ತೆಪ್ಪವನ್ನು ತೆಗೆದುಕೊಂಡು ಕೆರೆಯೊಳಗೆ ಇಳಿದಿದ್ದಾರೆ. ಇವರಲ್ಲಿ ಮಂಜುನಾಥ್ ಕೋಗಿಲು ಲೇಔಟ್ ನಿವಾಸಿಯಾದರೆ ಉಳಿದವರೆಲ್ಲರೂ ಅಗ್ರಹಾರ ಬಡಾವಣೆ ನಿವಾಸಿಗಳು.

ತೆಪ್ಪ ಸ್ವಲ್ಪದೂರ ಸಾಗುತ್ತಿದ್ದಂತೆ ಹಾವೊಂದು ತೆಪ್ಪದ ಸಮೀಪದಲ್ಲೇ ತಲೆ ಎತ್ತಿ ನಿಂತಿದೆ. ಇದರಿಂದ ಗಾಬರಿಗೊಂಡ ಇವರೆಲ್ಲರೂ ತೆಪ್ಪದ ಒಂದು ಕಡೆಗೆ ಬಂದು ನಿಂತಾಗ ತೆಪ್ಪ ಹತೋಟಿ ತಪ್ಪಿ ಎಲ್ಲರೂ ನೀರಿಗೆ ಬಿದ್ದಿದ್ದಾರೆ. ಈಜು ಬಾರದ ಭರತ್, ಶರತ್ ಹಾಗೂ ಶ್ರೀಧರ್ ಅಲ್ಲೇ ಒದ್ದಾಡುತ್ತ ನಿಂತಿದ್ದಾರೆ. ಈಜು ಬರುತ್ತಿದ್ದ ವಾಲೆರಾಮ ಮತ್ತು ತೇಜಸ್ ಸುಮಾರು 200 ಮೀಟರ್ ದೂರ ಈಜಿದ್ದಾರೆ. ದಡ ತಲುಪಲು ಇನ್ನೇನು 10 ಮೀಟರ್ ಇದೆ ಎನ್ನುವಾಗ ಆಯಾಸಗೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ದಡದಲ್ಲೇ ಉಳಿದಿದ್ದ ಚೇತನ್ ಮತ್ತು ಮಂಜುನಾಥ್ ಮೀನು ಹಿಡಿಯುವವರ ನೆರವಿನಿಂದ ಮೂವರಿಗೆ ಬೆಂಡುಗಳನ್ನು ನೀಡಿ ಈಜಿ ದಡ ಸೇರಲು ನೆರವಾದರು. ನಂತರ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿಯಾಗಿದ್ದ  ಕಾರಣ ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ಪೊಲೀಸ್ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಸುಮಾರು 9 ಗಂಟೆಗೆ ಇಬ್ಬರ ಶವಗಳನ್ನು ನೀರಿನಿಂದ ಹೊರತೆಗೆಯಲಾಯಿತು. ನಂತರ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ಶವ ಪರೀಕ್ಷೆ ನಡೆಸಿ ಶವಗಳನ್ನು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.