ADVERTISEMENT

ಮೀಸಲಾತಿ ಜಾಗೃತ ದಳ ರಚನೆ ಅಗತ್ಯ

ನಿವೃತ್ತ ಮೇಜರ್ ಜನರಲ್ ಎಂ.ಸಿ. ನಂಜಪ್ಪ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 20:05 IST
Last Updated 7 ಡಿಸೆಂಬರ್ 2012, 20:05 IST
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ರಾಜಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು `ಸಶಸ್ತ್ರ ಪಡೆಗಳ ಧ್ವಜ'ವನ್ನು ಬಿಡುಗಡೆ ಮಾಡಿದರು. ಇಲಾಖೆಯ ನಿರ್ದೇಶಕ ಪಿ.ಬಿ.ಶೆಟ್ಟಿ, ನಿವೃತ್ತ ವೈಸ್ ಅಡ್ಮಿರಲ್ ಬೋಳಾ ರಾಧಾಕೃಷ್ಣರಾವ್, ನಿವೃತ್ತ ಮೇಜರ್ ಜನರಲ್ ಎಂ.ಸಿ.ನಂಜಪ್ಪ ಚಿತ್ರದಲ್ಲಿದ್ದಾರೆ 	-ಪ್ರಜಾವಾಣಿ ಚಿತ್ರ
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ರಾಜಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು `ಸಶಸ್ತ್ರ ಪಡೆಗಳ ಧ್ವಜ'ವನ್ನು ಬಿಡುಗಡೆ ಮಾಡಿದರು. ಇಲಾಖೆಯ ನಿರ್ದೇಶಕ ಪಿ.ಬಿ.ಶೆಟ್ಟಿ, ನಿವೃತ್ತ ವೈಸ್ ಅಡ್ಮಿರಲ್ ಬೋಳಾ ರಾಧಾಕೃಷ್ಣರಾವ್, ನಿವೃತ್ತ ಮೇಜರ್ ಜನರಲ್ ಎಂ.ಸಿ.ನಂಜಪ್ಪ ಚಿತ್ರದಲ್ಲಿದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: `ಸರ್ಕಾರದ ಎಲ್ಲ ಇಲಾಖೆಗಳಲ್ಲೂ ನಿವೃತ್ತ ಸೈನಿಕರಿಗೆ ಶೇ 10 ರಷ್ಟು ಪ್ರಮಾಣದಲ್ಲಿ ಮೀಸಲಾತಿ ಜಾರಿಯಾಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳಲು ಜಾಗೃತ ದಳವನ್ನು ರಚಿಸುವ ಅಗತ್ಯವಿದೆ' ಎಂದು ನಿವೃತ್ತ ಮೇಜರ್ ಜನರಲ್ ಎಂ.ಸಿ.ನಂಜಪ್ಪ ಅಭಿಪ್ರಾಯಪಟ್ಟರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ರಾಜಭವನದಲ್ಲಿ ಶುಕ್ರವಾರ ಆಯೋಜಿಸಿದ್ದ `ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಸಾಮಾನ್ಯವಾಗಿ ಎಲ್ಲ ಇಲಾಖೆಗಳಲ್ಲೂ ಶೇ 2 ರಿಂದ 3 ರಷ್ಟು ಪ್ರಮಾಣದಲ್ಲಿ ಮಾತ್ರ ಮೀಸಲಾತಿಯನ್ನು ನೀಡುವ ಮೂಲಕ ನಿವೃತ್ತ ಸೈನಿಕರನ್ನು ಕಡೆಗಣಿಸಲಾಗುತ್ತಿದೆ. ಆದ್ದರಿಂದ ಕಾನೂನು, ಸೈನಿಕ ಹಾಗೂ ಸರ್ಕಾರದ ಪ್ರತಿನಿಧಿಯನ್ನು ಒಳಗೊಂಡ ಜಾಗೃತ ದಳವು ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಮರ್ಪಕ ಮಾಹಿತಿಯನ್ನು ಒದಗಿಸಬೇಕು' ಎಂದು ಸಲಹೆ ನೀಡಿದರು.

`ನಿವೃತ್ತ ಸೈನಿಕರಿಗೆ ಬಸ್ ಪಾಸ್ ಅನ್ನು ಉಚಿತ ನೀಡುವ ಬಗ್ಗೆ ಸರ್ಕಾರ ಇನ್ನು ಚಿಂತನೆ ನಡೆಸುತ್ತಲೇ ಇದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಸೈನಿಕರು ಹಾಗೂ ಅವರ ಕುಟುಂಬವನ್ನು ಕಾಯುವುದು ಸರ್ಕಾರದ ಕರ್ತವ್ಯ' ಎಂದು ಹೇಳಿದರು.

ನಿವೃತ್ತ ವೈಸ್ ಅಡ್ಮಿರಲ್ ಬೋಳಾ ರಾಧಾಕೃಷ್ಣರಾವ್, `ದೇಶಕ್ಕಾಗಿ ಬದ್ಧತೆ ತೋರಿಸುವ ಸೈನಿಕರು ತವರಿಗೆ ಮರಳಿದಾಗ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕು. ಇಲಾಖೆಯಿಂದ ಇಲಾಖೆಗೆ ಅಲೆಯುವುದನ್ನು ತಪ್ಪಿಸಬೇಕು' ಎಂದು ಹೇಳಿದರು.

`ವರ್ಷಕ್ಕೆ 3 ರಿಂದ 4 ಸಾವಿರ ಸೈನಿಕರು ನಿವೃತ್ತರಾಗುತ್ತಾರೆ. ಈ ಪೈಕಿ ಕೆಲವರು ಊರುಗಳಿಗೆ ಮರಳಿ ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶಿಸ್ತು ಹಾಗೂ ಶೌರ್ಯದಿಂದ ಕೆಲಸ ಮಾಡಿ ಅನುಭವ ಇರುವ ನಿವೃತ್ತ ಸೈನಿಕರಿಗೆ ಸರ್ಕಾರ ಸೂಕ್ತ ಹುದ್ದೆ ನೀಡಬೇಕು ಅಲ್ಲದೇ ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ನಡೆಸಲು ಅವಕಾಶ ನೀಡಬೇಕು' ಎಂದು ತಿಳಿಸಿದರು.

ಇಲಾಖೆಯ ನಿರ್ದೇಶಕ ಪಿ.ಬಿ.ಶೆಟ್ಟಿ, `ನಿವೃತ್ತ ಸೈನಿಕರ ಆಸ್ತಿ ತೆರಿಗೆಯಲ್ಲಿ ಶೇ 50 ರಷ್ಟು ವಿನಾಯಿತಿಯನ್ನು ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು' ಎಂದು  ಹೇಳಿದರು.

ಮುಂಬೈ ಉಗ್ರರ ದಾಳಿಯ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪೋಷಕರಿಗೆ ಸೈನಿಕರ ನಿಧಿಯಿಂದ 4.5 ಲಕ್ಷ ರೂಪಾಯಿ ಹಾಗೂ ಜಮ್ಮು  ಕಾಶ್ಮೀರದಲ್ಲಿ ಉಗ್ರರ ವಿರುದ್ದ ನಡೆದ `ಆಪರೇಷನ್ ರಕ್ಷಕ್' ಕಾರ್ಯಾಚರಣೆಯಲ್ಲಿ  ಹುತಾತ್ಮರಾದ ಕ್ಯಾಪ್ಟನ್ ಓಂಕಾರನಾಥ ರಾವ್ ಕುಟುಂಬಕ್ಕೆ 1.5 ಲಕ್ಷ ರೂಪಾಯಿಯ ಚೆಕ್ ವಿತರಿಸಲಾಯಿತು. ಇದೇ ವೇಳೆ  ಅತಿ ಹೆಚ್ಚು ನಿಧಿ ಸಂಗ್ರಹಿಸಿದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ರಾಜ್ಯಪಾಲರು ಬಹುಮಾನ ಸಲ್ಲಿಸಿದರು.

`ದೇಶದ ಸುರಕ್ಷತೆಯನ್ನೇ ನಿರ್ಲಕ್ಷಿಸಿದಂತೆ'
`ದೇಶಕ್ಕೆ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರನ್ನು ಸರ್ಕಾರ ನಿರ್ಲಕ್ಷ್ಯಿಸಿದರೆ ದೇಶದ ಸುರಕ್ಷತೆಯನ್ನೇ ನಿರ್ಲಕ್ಷ್ಯ ಮಾಡಿದಂತೆ' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳಿದರು.

`ಕೌಟುಂಬಿಕ ಹಾಗೂ ಖಾಸಗಿ ಜೀವನದಿಂದ ವರ್ಷಗಟ್ಟಲೇ ದೂರವಿರುವ ಸೈನಿಕರು ಎಲ್ಲ ನೈಸರ್ಗಿಕ ದುರಂತ ಹಾಗೂ ಯುದ್ದದ ಸಂದರ್ಭದಲ್ಲಿ ಹಾಜರಿರುತ್ತಾರೆ. ದಿನದ 24 ಗಂಟೆಗಳ ಕಾಲ ದೇಶದ ರಕ್ಷಣೆಗೆ ಕಟಿಬದ್ಧರಾಗುವ ಸೈನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು' ಎಂದು ತಿಳಿಸಿದರು.

`ನಿವೃತ್ತ ಸೈನಿಕರಿಗೆ ರಾಜಕೀಯ ಮೀಸಲಾತಿಯೂ ಸಮರ್ಪಕವಾಗಿ ದೊರೆತಿಲ್ಲ. ಕಾವೇರಿ ವಿವಾದ ಹಾಗೂ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಕಾರಣದಿಂದ ಇವತ್ತಿನ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಗೆ ಭಾಗವಹಿಸಲು ಸಾಧ್ಯವಾಗಿಲ್ಲ. ಆದರೆ ಸೈನಿಕರ ಕಾರ್ಯಕ್ರಮವಾದ್ದರಿಂದ ಕನಿಷ್ಠ ಆಡಳಿತಾಧಿಕಾರಿಗಳನ್ನು ಕಳುಹಿಸುವ ಸೌಜನ್ಯ ತೋರಿಸಬೇಕಿತ್ತು' ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT